ಗುರುವಾರ, ಸೆಪ್ಟೆಂಬರ್ 20, 2012

ವಿನಮ್ರ ವಿನ೦ತಿ



ಮನವದುವು ಸಣ್ಣಗೆ ಕ೦ಪಿಸುತಿದೆ
ಕ೦ಪನಕೆ ಕಣ್ಣುಗಳೆರಡು
ಅಲ್ಲಲ್ಲಿ ಹೊರಳಾಡಿಸುತಿವೆ
ಹೊರ ಜಗದ ಸೊಬಗ ನೋಡುತಿದೆ
ಬ೦ದೆನ್ನ ತಬ್ಬಿ ಕ೦ಪನದ ಮನವ ಸ೦ತೈಸಿ
ಬಾಹು ಬ೦ಧನದಲಿ ಸಲಹೆನ್ನ ವಿನಮ್ರದಲಿ ಬೇಡುತಿಹೆ !!


ಶನಿವಾರ, ಮೇ 12, 2012

ತುಸು ನಗಬಾರದೇ


ನಾಲ್ಕು ದಿನದ  ಬಾಳ್ವೆಯಲಿ
ತುಸು ದೂರ ನಡೆದಿರುವೆ  ಏಕಾಂಗಿ 
ಅಲ್ಲಲ್ಲಿ ತಡವರಿಸಿದೆ ದಾರಿಯು ತೋಚದೆ 
ಎದ್ದು ನಿಲ್ಲಲು ಪರಿ ಪರಿಯಲಿ ಹವಣಿಸಿದೆ

ಬರುತ್ತವೆ ನೋವು ಕಷ್ಟ ಕಾರ್ಪಣ್ಯಗಳು 
ಜೀವನದ ಸುಗುಮ ಹಾದಿಗೆ  ಕಲ್ಲು ತೊಡರಂತೆ  
ಸ್ನೇಹ ಪ್ರೀತಿ ನಂಬಿಕೆಯ ಸೋಜಿಗಗಳು  
ಸಾರ್ಥಕ ಬದುಕಿನ ಘಂಟೆ 

ನೋವು ನಲಿವು ಹರುಷ ಕೀರ್ತಿ 
ತುಂಬಿರಲು ಬಾಳು ಬಲು ಸೊಗಸು
ಮನ ತುಂಬಿ ನಿಸ್ವಾರ್ಥದಲಿ 
ಎಲ್ಲೆಡೆ ನಗೆಯ  ಹೊನಲು ಹರಿಸು  


ಮಂಗಳವಾರ, ಮೇ 1, 2012

ಬಣ್ಣಗಳ ತೇರು



ಸುಂದರ ಚಿತ್ರಗಳು 
ಬಣ್ಣ ಬಣ್ಣದಲ್ಲಿ ಮೂಡುತಿವೆ
ಚಟ್ ಪಟ್ ಎಂಬ ಸದ್ದು 
ಕರಣಕ್ಕೆ ಬಡಿಯುತಿವೆ 

ಮೂಡುತಿವೆ ಆಗಸದಲ್ಲಿ 
ಸುಂದರ ಬಣ್ಣಗಳ ಚಿತ್ರಗಳು 
ಬಿಡಿಸಲು ಯತ್ನಿಸಿವೆ ರಂಗವಲ್ಲಿ 
ಆನಂದಿಸಿವೆ ನೋಡುಗರ ಮನಗಳು 

(ಸಂದರ್ಭ : ಯಾವದೋ ಕಾರ್ಯಕ್ರಮದ ನಿಮಿತ್ತ ಸಿಡಿಸಿದ ಸಿಡಿಮದ್ದು ಪ್ರದರ್ಶನ )

ಸುಂದರ ಸಂಜೆ





( ಮನದಲ್ಲಿ ಮೂಡುತಿವೆ
 ಖುಷಿಯ ರೇಖೆಗಳು 
 ನನ್ನನ್ನೇ ಮೂದಲಿಸುತ್ತಿವೆ 
 ಅದರ ಪ್ರಖರತೆಗಳು )

ಸಂಜೆಯ ಹೊನ್ನಿನ ಬಣ್ಣಕ್ಕೆ 
ಸುಂದರ ನಗುವೊಂದು ಮೂಡಿತು 
ಸುಂದರ ಹಾಡಿಗೆ 
ಮನವು ಗುಣುಗುನಾಯಿಸಿತು

ಹಕ್ಕಿಗಳೆಲ್ಲವು ತಮ್ಮ ಗೂಡು ಸೇರಲು 
ಭರದಲಿ ತವಕಿಸುತ್ತಿರೆ 
ಮನದಲ್ಲಿದ್ದ  ದುಗುಡ ತುಂಬಿದ  ಯೋಚನೆಗಳು 
ಬೆಚ್ಚನೆ ಮುದುಡಿ ಮಲಗುತ್ತಿವೆ 

ತಂಗಾಳಿಯು ನನ್ನ ಸಂಗ ಬಯಸಿ 
ನನ್ನ ಸಂತೋಷಕ್ಕೆ ಭಾಗಿಯಾಯಿತು
ಸುಂದರ ಸಂಧ್ಯಾಕಾಲ ನನ್ನ ಬಳಸಿ 
ಬೆಳಗಿನ ಎಲ್ಲ ನೋವ ಮರೆಸಿತು 
ನೋವ ಮರೆಸಿ ನಗುವ ಹರಿಸಿ 
ಸೂರ್ಯನು ಮುಳುಗಿದನು 
ನಾಳೆಯ ಮುಂಜಾವಿಗೆ ಪ್ರೇರೇಪಿಸಿ 
ಮುಸ್ಸಂಜೆಯ ಸವಿಯ ತಿನಿಸಿದನು 

ಶುಕ್ರವಾರ, ಏಪ್ರಿಲ್ 27, 2012

ಅರ್ಥವಿಲ್ಲದ ಕಲ್ಪನೆ .... ಮುದುಡಿತು..



ಅರಳಿತೊಂದು ಸುಂದರ ಕುಸುಮವು
ಪರಿಮಳವ ಸೂಸುತಿಹುದು 
ಎಲ್ಲೆಡೆಗೆ ಕಂಪ ಬೀರುತಿಹುದು 

ಜನಿಸಿತೊಂದು ಮಗುವು 
ಬೆಳೆಯಿತದುವು ಒಳ್ಳೆಯತನವ 
ಮೈಗೂಡಿಸಿಕೊಂಡು   

ಹಿಸುಕಿ ಹಾಕಿರುವರೆ ನಿನ್ನ  
ದೃಷ್ಟಿ ತಗುಲಿತೆ ನಿನಗೆ 
ಮೋಸ ಮಾಡಿರುವರೇನು
ಪರಿತಪಿಸುತಿರುವೆಯೇಕೆ ಹೀಗೆ
ಕೊಂಚ ನಲುಗಿರುವೆ ಏನು 
 ಬೆದರಿ ನಿಂತಿರುವೆಯೇನು 
ಮುಖ ಬಾಡಿ ನೋವ ತುಂಬಿ 
ಗಬ್ಬು ವಾಸನೆಯಾಯಿತೆ ನಮಗೆ 

ಮಂಗಳವಾರ, ಏಪ್ರಿಲ್ 24, 2012

ಕನಸುಗಳ ನೋವಿನ ಛಾಯೆ





ಮನದಲ್ಲಿ ಬುಗಿದೆದ್ದ ನೋವಿನ ನೆರಳಿಗೆ 
ಮನವದುವು ಮುದುಡಿ ಮಮ್ಮಲು ಮರುಗಿದೆ
ಕಾಣಿಸುತಿಹುದೇ ಬರಿ ಕತ್ತಲು ಕಣ್ಣೆದುರಿಗೆ 
 ಅದ ಭ್ರಮಿಸಿ ಹೃದಯವು ಮೆದುವಾಗಿ ಕಂಪಿಸಿದೆ 

ಬಿಟ್ಟು ಹೋದವೇಕೆ ನಾನಂದು ಕಂಡಿದ್ದ ಕನಸುಗಳು 
ಕಣ್ಣೇರು ಸುರಿಸುತಿದೆ ಮನ  ಕೊರಗಿ ಕೊರಗಿ 
ಸಾಲದಾಯಿತೆ ನನ್ನೆಲ್ಲ ಪ್ರಯತ್ನಗಳು 
ಅಡಗಿ ಕುಂತವೆ ಭಾವನೆಗಳು ಲೋಕಕ್ಕೆ ಹೆದರಿ 

ಕೂಗಿ ಕರೆಯುತಿಹೆನು ಕನಸುಗಳ ಪುನಃ ನನ್ನೆಡೆಗೆ 
ಅರಳಿಸಬೇಕಾಗಿದೆ ದುಗುಡ ತುಂಬಿದ ಮನವ
ಮತ್ತದೇ ಕನಸುಗಳು ಗಾಳಿಯಲಿ ತೇಲುತಿರೆ
ಬಿಡಲಾರೆ ನಿಮ್ಮನ್ನು ಜೀವನಕೆ ಅರ್ಥವನು ಕೊಡುವವರ




ಸೋಮವಾರ, ಏಪ್ರಿಲ್ 23, 2012

ಕನಸಿನೊಳು ಕನಸಾಗಿ ....


ನೂರಾರು ಆಲೋಚನೆಗಳು 
ಲವಲವಿಕೆಯ ಬಂಧಗಳು 
ಓಡೋಡಿ ಬರುತಲಿವೆ ನನ್ನಲ್ಲಿಗೆ
ಕಾಣದ ಮುಖಗಳು 
ಕೇಳಿಸದ ಮಾತುಗಳು 
ಕಚಗುಳಿಯ ಇಡುತಿವೆ ಮೆಲ್ಲಗೆ 

ಬಂಧನಗಳ ತೆಕ್ಕೆಯಲಿ 
ಮಾತುಗಳ ಅಕ್ಕರೆಯಲಿ 
ಬೀಳುವೇನು ಎಂದೋ 
ಎದೆಯಲ್ಲಿ ಸಣ್ಣ ಕಂಪನವು 
ಕಣ್ಣಲ್ಲಿ ಹೊಸತನವು 
ಗಬಕ್ಕನೆ ಹಿಡಿದಿಡುವುದೇ 

ರಾತ್ರಿಯ ಕನಸುಗಳು 
ತನ್ನಲ್ಲಿ ಅಳುತಿರಲು 
ಮೂಡಿ ಬರಲಿಹುದೇ ಹೊಸ ಪುಳಕಗಳು 
ಮಲಗುತಿವೆ ಕಣ್ಣ ರೆಪ್ಪೆಗಳು 
ತುಟಿಯಲ್ಲಿ ತುಸುನಗುವು 
ಜಾರಿ ಬಿದ್ದಿತೆ ಮುತ್ತ ಹನಿಗಳು 

ಸಿಹಿಯಾದ ಕನಸುಗಳು ಬೀಳುತಿರಲು 
ನೋವೆಲ್ಲ ಮಾಗಿರಲು 
ಅಡಗಿದ  ಪರದೆಯು ಸರಿಯುತಿರಲು 
ಪಾತ್ರಧಾರಿಗಳು ನಾವೆಲ್ಲಾ 
ಆಡಲೇ ಬೇಕು ಜೀವನದ ಹಗಲೆಲ್ಲ 
ಕನಸುಗಳು ಬಂದೊಮ್ಮೆ 
ಹೊಸ ಲೋಕಕ್ಕೆ  ಎಳೆದೊಯ್ಯುತಿರಲು  

ಭಾನುವಾರ, ಏಪ್ರಿಲ್ 22, 2012

ಕನ್ನಡ - ಕಸ್ತೂರಿ








ಬೆಲೆ ಬಲ್ಲಿರೆನೂ ಕನ್ನಡ ಭಾಷೆಯ 
ಕಂಪ  ಹರಡಬಲ್ಲದು  ಬಲು ದೂರ 
ಪರವಶವಾಗುವೆವು ಭಾವೈಕ್ಯವಾಗುವೆವು 
ತಲ್ಲೀನವಾಗುವೆವು ಇದರ ಸುಂದರ ಉಯಿಲಿಗೆ 
ಮೃಷ್ಟಾನ್ನ  ಭೋಜನವು ಸಂತೃಪ್ತ ಭಾವನೆಯು 
ಕನ್ನಡ ಕವನಗಳ ಓದುಗರಿಗೆ  

ಮಾತೃಭಾಷೆಯು  ನಮ್ಮ ಸೊತ್ತು
ಅನ್ಯ ಭಾಷೆಯು ನಮದಲ್ಲದ ಸ್ವತ್ತು 
ಕೊಂಡುಕೊಳ್ಳಿರಿ  ಅನ್ಯರ ಸಂಪತ್ತು 
ಆದರೆ  ಮಾರುಹೋಗದಿರಿ ತಂದೀತು ಆಪತ್ತು 

ಶುಕ್ರವಾರ, ಏಪ್ರಿಲ್ 20, 2012

ತಾಳ್ಮೆ




ಬದುಕು ಕಲಿಸುವುದು
ವಿಧ ವಿಧ ಪಾಠವ
ಊಹೆಗೂ ಮೀರಿರುವುದು
ಅದರ ಪ್ರಭಾವ

ತಾಳಿದವನು ಬಾಳಿಯಾನು
ಅದ ತಿಳಿದವನೇ ಜಗ ಆಳಿಯಾನು
ಹಿಡಿತದಲ್ಲಿದ್ದರೆ ಸಿಟ್ಟು ಸಂಯಮ
ಸಿಗುವುದು ಜೀವನಕ್ಕೆ ಆಯಾಮ

ಇಟ್ಟ  ಹೆಜ್ಜೆಯ ನೆನಪಿಸದೆ
ಹಿಂತಿರುಗಿ ನೋಡದೆ
ಮುಂದೆ ಕಾಣುವ ಹೊಂಡದಲಿ ಕಾಲಿಡದೆ
ಸಾಧನೆಗೆ ಅಡಿಯಿಡುವುದೇ

ಒಂದು ಮಳೆಯ ಸ್ಪರ್ಶ




ಮಳೆಯ ಸ್ಪರ್ಶಕೆ
ಇಳೆಗಾಯಿತು ನಾಚಿಕೆ
ತನ್ನೆಲ್ಲ  ಕೊಳೆಯ ಹರಿವ
ನೀರಿನೋಟ್ಟಿಗೆ ಹರಿ ಬಿಟ್ಟು
ತ್ರಷೆಯು ಇಂಗಿಸಿ
ಹೊಸ ವಸ್ತ್ರವ ತೊಟ್ಟು
ಸುಂದರವಾಗಿ ಮೈ ತಳೆದು
ಸಂಪನ್ನವಾದಂತೆ ಭಾಸವಾಯಿತು

ಮಂಗಳವಾರ, ಏಪ್ರಿಲ್ 17, 2012

:)

ಸುತ್ತಲೂ ಪಸರಿಸಿದೆ ಕಣ್ಣಿನ ಕೆಳಗೆಲ್ಲ ಕಪ್ಪು
ಹೆಪ್ಪುಗಟ್ಟಿ ನಿಂತಿದೆ ಮನದಾಳದ ನೋವು
ಕಣ್ಣ ಹನಿಗಳೆಲ್ಲ ಬತ್ತು ಬೇಸಿಗೆಯ ಬರದ ಛಾಯೆ
ಬೇಗೆಯನು ಸಹಿಸಲಸಾಧ್ಯವು ಹರಿಸಿ ಬಿಡೊಮ್ಮೆ
ಕಣ್ಣಲ್ಲಿ ಸಂತಸದ ಹನಿಗಳ ಮಳೆ

ಅಗೋಚರ ಹಂಬಲ


ಕಣ್ಣೆವೆ ಮುಚ್ಚಿದರು ಕರಗಲಾರದು
ನಿನ್ನಯ ನೆನಪು
ನೆನೆದು ನೆನೆದು ಮನ ಹಸಿಯಾಯಿತು
ಎಂದನಿಸಿತು ಬರಬಾರದೇ ಮರೆವು

ಕತ್ತಲಲಿ ಬೆಳಕನರಸಿ ಹೊರಟಿರುವೆ
ದೂರದಲಿ ತೋರುತಿಹುದೇ ಸಣ್ಣ ದೀಪವು
ಗೋಚರಿಸಲು ಅದರ ಪ್ರಖರವು
ದೂರವಾಯಿತು ಮನದ ಅಳಲು

ಶುಕ್ರವಾರ, ಏಪ್ರಿಲ್ 13, 2012

ತಪ್ಪು ನನ್ನದು

ಹೀಗೇಕೆ ನೀನು ನಂಗೆ ಹತ್ತಿರ
ಕಳೆದುಕೊಳ್ಳಲು ನನಗಿಲ್ಲ ಆತುರ
ಮೂಳೆಯಿಲ್ಲದ ನಾಲಿಗೆ ಆಡಿದ ಮಾತುಗಳಿಗೆ
ಕೊಡುವುದಿಲ್ಲವೇ ಕ್ಷಮೆ
ಅಸ್ತು ಅಂದು ತಲೆ ಅಲ್ಲಾಡಿಸಿದ ಮರುಘಳಿಗೆ
ಏರಿ ಕೂರುವೆ ಸಮಧಾನ ಎಂಬ ಮಳಿಗೆ

ಬುಧವಾರ, ಏಪ್ರಿಲ್ 11, 2012

ದಡ ಸೇರಿವೆ ಹಡಗುಗಳು
ಸುನಾಮಿಯ ಭೀತಿಯಲಿ
ಹಡಗಿನ ಮಿನುಗುವ ಸಾಲು ದೀಪಗಳು
ಕಣ್ಣಿಗೆ ತಂಪನ್ನೀಯಿವೆ
(ಮನೆಯ ಉಪ್ಪರಿಗೆಯಿಂದ ನೋಡಿದ ದೃಶ್ಯದಿಂದ ಉಧ್ಭವ ವಾಗಿದ್ದು - ಸುನಾಮಿಯ ಎಚ್ಚರಿಕೆಯ ಘಂಟೆ )

ನಾನು-ನನ್ನ ಭಾವಗಳು



**********************
ಹೀಗೇಕೆ ಹಿಗ್ಗು ಮುಗ್ಗಾಗಿ
ಎಳೆಯುತ್ತಿರುವೆ ನನ್ನ
ಒಮ್ಮೊಮ್ಮೆ ನನ್ನನ್ನು
ಜಗ್ಗಿ ಬಿಡುವೆ ಬೀಳುವ ಮುನ್ನ

ಬಂದೆನ್ನ ಅಪ್ಪಿ ಬಿಡುವೆ
ಹೇಳದೆಯೇ ಕೇಳದೆಯೇ
ಕಣ್ಣಲ್ಲಿ ನೀರ ತುಂಬುವೆ
ಮೊಗದಲ್ಲಿ ನಗೆಯ ಜೊತೆಯೇ

ಬಾ ಎಂದಾಗ ಬರದೆ
ನನ್ನ ನೀ ಕಾಡುವೆ
ಕರೆಯದೆ ಬಂದು
ನನ್ನ ಜೊತೆ ನೀ ಆಡುವೆ

ನಿನ್ನ ಅಲೆಯ ಸುಳಿಗೆ ಸಿಕ್ಕ
ಹಾಳು ಬಿದ್ದ ಮರದ ಚೂರು
ನಿನ್ನ ಜೊತೆಯೇ ಎಳೆದೊಯ್ಯುವೆ
ನಿನ್ನ ಜೊತೆಯೇ ಸಾಗುವೆ

ನನ್ನ ಭಾವ ನನ್ನ ಜೊತೆ
ಮರೆತು ಬಿಡುವೆ ನನ್ನನೆ
ಬೇಡಿಕೊಂಬೆ ಬರದಿರಲಿ ವ್ಯಥೆ
ಇದುವೇ ನನ್ನ ಜೀವನದ ಗಾಥೆ

ಸೋಮವಾರ, ಏಪ್ರಿಲ್ 9, 2012

!!!!


ಬರೆಯಬೇಕೆಂಬ ಇಚ್ಛೆ
ಮನದಲ್ಲೇನು ಇಲ್ಲ ಚರ್ಚೆ
ನಿರ್ಲಿಪ್ತತೆಯಿಂದ ಕೂಡಿದೆ ಮನಸು
ಕಟ್ಟಬೇಕಾಗಿದೆ ಇನ್ನೊಮ್ಮೆ ಕನಸು

ಗುರುವಾರ, ಮಾರ್ಚ್ 29, 2012

ಸಮಾಧಾನ- ಕಣ್ಣೀರು


ದುಗುಡ ತುಂಬಿದ ಮನವು
ಬೇಸರದಿಂದ ಜಜ್ಜರಿಸಿದ ಲಯವು
ಒಂದೇ ಪ್ರೀತಿಯ ಮಾತು ಸಾಕಾಯಿತು
ತಲೆ ನೇವರಿಸಿದಂತಹ ಭಾಸವಾಯಿತು
ಥಟ್ಟನೆ ಇಳಿದು ಬಿತ್ತೊಂದು ಕಣ್ಣ ಹನಿ
ಸಮಾಧಾನವಾಯಿತು ಮನದ ಗಣಿ
ನಿಟ್ಟುಸಿರು ಬಿಟ್ಟಂತ ಧ್ವನಿ

ಬುಧವಾರ, ಮಾರ್ಚ್ 28, 2012

ಏಕೆ ತೋರುವೆ ತಾರತಮ್ಯ ?




ಹೆಣ್ಣು ನೀನು ಜಗದ ಮಾಯಾ ಸುಂದರಿ
ತೋರುತಿಹೆ ಎಲ್ಲೆಲ್ಲೂ ನಿನ್ನ ಪರಿ
ಆದಿ ಮಾತೆಯಾಗಿ ಪೂಜಿಸಲು ನಿನ್ನ
ಭುವನ ವಸುಂಧರೆಯಾಗಿ ತನ್ನ

ಮನೆಯ ದೀಪಕೆ ನೀನೆ ಎಣ್ಣೆ
ನಿನಗೆ ಸರಿ ಸಾಟಿಯಿಲ್ಲ ಹೆಣ್ಣೇ
ಮನ ಮನೆಯ ತುಂಬಿದೆ
ನಲಿವು ನಗುವ ಪಸರಿಸಿದೆ

ಅಕ್ಕರೆಯ ಅಕ್ಕನಾಗಿ
ಮುದ್ದಿನ ತಂಗಿಯಾಗಿ
ತಮ್ಮನಿಗೆ ಬಲವಾಗಿ
ಅಪ್ಪನ ಮನಸಿಗೆ ಮುದ ನೀಡಿ
ಅಮ್ಮನ ಪಾದದಡಿಗೆ ಶಿರ ಬಾಗಿ
ಅಮ್ಮನ ಕೆಲಸದಲ್ಲಿ ನೆರವಾಗಿ
ಗಂಡನ ತೋಳುಗಳಿಗೆ ಬಲವಾಗಿ
ಹುಟ್ಟಿದ ಮನೆಗೂ ಹೋದ ಮನೆಗೂ
ಕೀರ್ತಿ ಪತಾಕೆಯಾಗಿ
ನಿನ್ನ ನೀನು ಗಂಧದ ಕೊರಡಂತೆ
ಜೀವ ತ್ಯಾಗವ ಮಾಡಿ
ನಿಸ್ವಾರ್ಥ ಸೇವೆಗೆ ಮುಡಿಪಾಗಿ

ಇಳೆಯಾಗಿ ವಸುಂಧರೆಯಾಗಿ
ನಮ್ಮ ಸಲಹುತ್ತಿರುವ ತಾಯಿಯೇ
ತಳೆದಿಹರು ನಿನಗಾಗಿ
ನಿನ್ನ ವಿರುದ್ಧವೇ ಧೋರಣೆಯ

ಹೆಣ್ಣು ನೀನು ಗಂಡು ನಾನು
ಎಂದೇಕೆ ಮೂದಲಿಸುವಿರಿ
ಎಲ್ಲ ರೂಪವ ತಾಳಿ ಸಲಹುವಳು ನಿಮ್ಮನ್ನು
ಹೆಣ್ಣಲ್ಲವೇ ಸರಿ

ಹೆಣ್ಣು ಗಂಡು ಸೇರಿ ಬಾಳ್ವೆ
ಸುಂದರ ಅಕ್ಷರಗಳಿರುವ ಹಾಳೆ
ಸಾಕು ನಿಲ್ಲಿಸಿರಿ ಆ ತಾರತಮ್ಯವ
ಮನ ತುಂಬಿ ಪೂಜಿಸಿರಿ
ತಾಳ್ಮೆ ಪ್ರೀತಿಯ ಅದಮ್ಯ ರೂಪವ

ಮಂಗಳವಾರ, ಮಾರ್ಚ್ 27, 2012

ಮೂಕ ಮನಸು


ತಲೆಯದುವು ಕಿಟಿಕಿಗಾನಿಸಿ
ಕಣ್ಣುಗಳೆರಡ ಹೊರ ಹೊರಳುಸುತ್ತಿರೆ
ಮನವದುವು ಮೂಕವಾಗಿದೆ
ಬಯಸಿದೆಲ್ಲವ ಸಿಗದುದೆ

ಬೆಳಕಿನ ಸ್ಪೂರ್ತಿಯಲಿ
ಬಣ್ಣ ಬಣ್ಣದ ವಸ್ತ್ರವು ಮಿನುಗುತಿರಲು
ಅದ ನೋಡಿ ಮನವದುವು
ಧರಿಸಲು ಆಸೆ ಪಡುತಿದೆ

ಬಯಲದುವು ಮಕ್ಕಳೆಲ್ಲರೂ
ಒಂದುಗೂಡಿ ಆಡುತಿರಲು
ಅಸೆಯದುವು ಮೂಡುತಿದೆ
ತನ್ನನ್ನು ಅಲ್ಲಿ ಭಾವಿಸುತಿದೆ

ತಣ್ಣನೆಯ ಗಾಳಿಯ ಸ್ಪರ್ಶಕೆ
ಮನವು ಮುದಗೊಳ್ಳಲು
ಆಸೆಯೆಲ್ಲವ ಕಟ್ಟಿ ಮನದಿ
ತಲೆಯಾನಿಸಿದೆ ವಿಶ್ರಮಿಸಲು ಸೀಟಿಗೆ

ಶುಕ್ರವಾರ, ಮಾರ್ಚ್ 16, 2012

ಒಂದು ಸುಂದರ ನಗುವಿಗೆ...ಇಷ್ಟು ಸಾಕಲ್ಲವೇ.. ???


ಮನವೇಕೊ ಹಿಂದಿನ ನೆನಪುಗಳ
ಮೆಲುಕುಹಾಕುತ್ತಿರಲು
ಪ್ರೀತಿಯ ಮಾತುಗಳು ಸೃಷ್ಟಿಸಿದ
ಶಾಂತತೆ ನಗುವ ತರಲು.. ಭಾವಗಳ ಬಾಚಿ ತಬ್ಬಲು
ಇಷ್ಟು ಸಾಕಲ್ಲವೇ??

ಮನವೇಕೊ ಸೋತು ಹೈರಾಣವಾಗಿ
ಕಣ್ಣೀರ ಹೊರಹಾಕುತ್ತಿರಲು
ಮೆಲ್ಲನೆ ಕೈ ಹಿಡಿದು ಸಾಂತ್ವನ ಹೇಳಿದ
ನುಡಿಗಳು ಸಮಾಧಾನ ತರಲು .... ಛಲದ ಪಣ ತೊಡಲು
ಇಷ್ಟು ಸಾಕಲ್ಲವೇ ??

ಮನವೇಕೊ ಬಗೆ ಬಗೆಯಾಗಿ
ಪರಿಹಾರದ ದಾರಿಯ ಹುಡುಕುತ್ತಿರಲು
ಸುಲಭದ ದಾರಿಯು ಮನದಲಿ ಮೂಡಲು
ಸಣ್ಣನೆಯ ನಗುವು ವದನದಲಿ ತೋರಲು.... ಸಾಧನೆಯ ಕಹಳೆ ಮೊಳಗಲು
ಇಷ್ಟು ಸಾಕಲ್ಲವೇ ??

ಮನವೇಕೊ ಪದಗಳ ಜೋಡಿಸಿ
ಕವನವ ಹೊಸೆಯುತ್ತಿರಲು
ಸುಂದರ ಭಾವವು ಮನದಲ್ಲಿ ಪುಟಿದೇಳಲು
ಸಂತೃಪ್ತಿ ಭಾವ ಮೂಡಲು... ಸುಂದರ ಕವನ ರಚನೆಯಾಗಲು
ಇಷ್ಟು ಸಾಕಲ್ಲವೇ ??

ಮುದ್ದು ಕಂದಮ್ಮನ ಎತ್ತಿ
ಮುದ್ದಾಡುತ್ತಿರಲು
ಕೆಳಗೆ ಇಳಿಯ ಬಿಡಲು ಅದು ನಿಮ್ಮ
ಕೊರಳಲಿ ಬರ ಸೆಳೆಯಲು... ಪ್ರೀತಿಯ ಸೆಲೆ ಪಸರಲು
ಇಷ್ಟು ಸಾಕಲ್ಲವೇ ??

ಬಚ್ಚಿಟ್ಟ ಬೇಸರದ ಭಾವನೆಗಳು
ತನ್ನಿಂತಾನೆ ತೆರೆದು ಕೊಳ್ಳುತ್ತಿರಲು
ನವಿರಾದ ಭಾವನೆಗಳ ನರ್ತನದೊಂದಿಗೆ
ಒಂದು ಸಣ್ಣ ಹನಿಯು ಕಣ್ಣ ತೇವ ಮಾಡಲು.. ಪ್ರಪುಲ್ಲ ಮನವು ನಿಟ್ಟುಸಿರು ಬಿಡಲು

ಪ್ರೀತಿಯ ಬಯಸಿದ ಮನಕ್ಕೆ
ಇಷ್ಟು ಸಾಕಲ್ಲವೇ ??

ಸೋಮವಾರ, ಮಾರ್ಚ್ 12, 2012

ನೆಲ್ಲಿತೀರ್ಥ...ಎಂಬ ದೇವಸ್ಥಾನ


ಭಯಂಕರ ನಿದ್ದೆಯಲಿ ಕನಸು ಕಾಣುತ್ತಿದ್ದೆ .. ಒಮ್ಮಿಂದೊಮ್ಮೆಲೆ ಅಮ್ಮನ ಕರೆ.."ಏಳು ..ಈಗಲೇ ತಡವಾಗಿದೆ..".. ಅಪ್ಪನ ಬಹು ದಿನದ ಯೋಜನೆಗೆ ಇಂದು(ಆದಿತ್ಯವಾರ) ತೆರೆ ಬೀಳುವ ಕ್ಷಣ.. "ನೆಲ್ಲಿ ತೀರ್ಥ " ಎಂಬ ನೈಸರ್ಗಿಕವಾಗಿ ಬೆಳೆದ ಒಬ್ಬರ ಪರಿಶ್ರಮದ ತಾಣ(ದೇವಸ್ಥಾನ ).. ಪ್ರಯಾಣ ಶುರು ಮಾಡಲು ಸಜ್ಜಾದೆವು..ಅಪ್ಪ ಅಮ್ಮ , ಪಕ್ಕದ ಮನೆ ಆಂಟಿ ಮತ್ತೆ ನಮ್ಮ ಪರಿಚಯದ ಅತ್ತೆ ಮಾಮ ಮತ್ತು ಅವರ ಮಗನೊಂದಿಗೆ ನಮ್ಮ ಕಾರಿನಲ್ಲಿ ತಾಣದೆಡೆಗೆ ಚಲನ..

ಬೆಳಿಗ್ಗೆ ೧೧ ಘಂಟೆ. ಸುಂದರ ಪ್ರಶಾಂತವಾದ ನೆಲ್ಲಿತೀರ್ಥ ಪ್ರದೇಶಕ್ಕೆ ತಲುಪಿದೆವು.. ಸುಮಾರು ೬-೭ ಕಿಲೋ ಮೀಟರುಗಳಷ್ಟು ಹೆದ್ದಾರಿಯಿಂದ ದೂರದಲ್ಲಿರುವ ಸ್ಥಳ.. ಸ್ವಂತ ವಾಹನದ ಅವಶ್ಯಕತೆ... "ಸೋಮನಾಥೇಶ್ವರ ಗುಹಾಲಯ" ಕ್ಕೆ ಸ್ವಾಗತ ಎಂಬ ಬೋರ್ಡ್ ನಮ್ಮನ್ನು ಆಗಮನಕ್ಕೆ ಸಂತಸ ಸೂಚಿಸಿದವು.. ಭಟ್ಟರ ಆಣತಿಯಂತೆ ಸಮೀಪದಲ್ಲಿರುವ ಕೆರೆಯಲ್ಲಿ ಮೈ ಬಟ್ಟೆ ಒದ್ದೆ ಮಾಡಿ ಬಂದು ದೇವರ ಸನ್ನಿಧಾನದಲ್ಲಿ ಕೈ ಮುಗಿದು "ಗುಹಾ ಪ್ರವೇಶ" ಕ್ಕೆ ಸನ್ನದ್ಧರಾದೆವು.
ಮನದಲ್ಲಿ ಏನೋ ಭಯ, ಕಳವಳ ಮನೆ ಮಾಡಿಯಾಗಿತ್ತು..ಜೀವನದಲ್ಲಿ ಮೊದಲ ಬಾರಿಗೆ ಆಮ್ಲ ಜನಕದ ಕೊರತೆ ಇರುವ ಪ್ರದೇಶಕ್ಕೆ ಹೋಗಲು ಮನ ಸಿದ್ಧ ಮಾಡಿಯಾಗಿತ್ತು.. ಒದ್ದೆ ಬಟ್ಟೆಯಲ್ಲೇ ಕೈ ಮುಗಿದುಕೊಂಡು "ಗೋವಿಂದಾ ರಮಣ ಗೋವಿಂದ ಗೋವಿಂದ " ಎನ್ನುತ್ತಾ ಸಾಲಾಗಿ ಸರತಿಯಂತೆ ಗುಹೆಯೊಳಗೆ ಪಾದಾರ್ಪಣೆ.. ತಣ್ಣನೆಯ ಅನುಭವ.. ಎಣ್ಣೆ ದೀಪ ಹೀದ ಒಬ್ಬ ಬಾಲಕ ನಮ್ಮ ದಾರಿ ಪಾಲಕ ಅಲ್ಲದೆ ದಾರಿ ತೋರುಕ.. ಮನದಲ್ಲಿ ಭಯ ಇನ್ನೂ ಜಾಸ್ತಿ ಆಗತೊಡಗಿತು.. ನಮ್ಮ ೭ ಜನರೊಟ್ಟಿಗೆ ಇಬ್ಬರು, ಗಂಡ ಹೆಂಡಿರು, ಮತ್ತೆ ೫೦ ರ ಆಸು ಪಾಸಿನ ಅಜ್ಜಿ ಜೊತೆಯಾದರು.. ಮನದಲ್ಲಿ ಭಕ್ತಿ ತುಂಬಿ ಬಾಯಲ್ಲಿ ಶಿವ ನಾಮ ಸ್ಮರಣೆ ಮಾಡುತ್ತಾ ಸಾಗಿದೆವು.. ಎದ್ದು ನಿಲ್ಲಲಾರದಂತ ಸಣ್ಣ ಗುಹೆ.. ಅಲ್ಲಲ್ಲಿ ಚಿಕ್ಕ ಎಣ್ಣೆ ದೀವಿಗೆಗಳು ನಮಗೆ ದಾರಿ ತೋರುತ್ತಿದ್ದವು.. ತೆವಳಿಕೊಂಡೇ ಮುಂದುವರಿಯಬೇಕಾದಂತ ಪರಿಸ್ಥಿತಿ.. ಎದ್ದು ನಿಂತರೆ ಮೊನಚಾದ ಕಲ್ಲುಗಳ ತಿವಿತ.. ಹರಿಯುತ್ತಿದ್ದ ನೀರಿನಲ್ಲಿ ತೆವಳಿ ಮುಂದೆ ಸಾಗುತ್ತಿದ್ದೆವು.. ಮನದಲ್ಲಿಯ ಭಾವ " ಅರ್ಧ ದಾರಿಯಲ್ಲೇ ಉಸಿರಾಡಲು ತೊಂದರೆಯಾಗಿ ಹಿಂದಿರುಗಳೂ ಆಗದೆ ಹೋದರೆ ಏನು ಗತಿ ?" ಎಂದು ಯೋಚಿಸುತ್ತಿರುವಾಗಲೇ.. ಸ್ವಲ್ಪ ವಿಶಾಲವಾದ ಜಾಗ ಸಿಕ್ಕಿತು.. ಅಲ್ಲಿಯೇ ಉದ್ಭವ ಈಶ್ವರ ಲಿಂಗ ತಟಸ್ಥವಾಗಿ ನಿಂತಿದೆ.. ಭಕ್ತಿಯಲ್ಲಿ ಕೈ ಮುಗಿದು ಸುತ್ತಲು ಇದ್ದ ನೀರಿನಿಂದ ಈಶ್ವರ ಲಿಂಗಕ್ಕೆ ಜಲಾಭಿಷೇಕ ಮಾಡಿ ತೀರ್ಥವನ್ನು ತಲೆಗೆ ಸಿಂಪಡಿಸಿದೆವು. ಗೈಡ್ ನ ಮಾಹಿತಿಯಂತೆ ಅಲ್ಲಿ ಇದ್ದ ಮಣ್ಣಿನಿಂದ ದೇಹ ಲೇಪನ.. ಇದರ ಉದ್ದೇಶವೇನೆಂದರೆ ಚರ್ಮದ ಏನೇ ಕಾಯಿಲೆ ಇದ್ದರೂ ಅದನ್ನು ವಾಸಿ ಮಾಡಬಲ್ಲಂತ ಶಕ್ತಿ ಹೊಂದಿದೆ.. ಗುಹೆಯ ಚರಿತ್ರೆಯ ಪರಿಚಯ.. ಗುಹೆಯ ಒಳ ಭಾಗದಲ್ಲಿ "ನೆಲ್ಲಿಕಾಯಿ" ಯಂತ ಗಾತ್ರದ ನೀರು ಯಾವತ್ತೂ ಜಿನುಗುತ್ತಿರುತ್ತದೆ..ಇದುವೇ ಆ ಸ್ಥಳಕ್ಕೆ ಹೆಸರು (ನೆಲ್ಲಿ ತೀರ್ಥ) ಬರಲು ಕಾರಣ. ಸುಮಾರು ೨೦೦ ಮೀಟರ್ ಉದ್ದದ ಗುಹೆಯಿಂದ ವಾಪಸು ಬರಲು ಹೊರಟೆವು.. ತೆವಳಿಕೊಂಡೇ ಬರತೊಡಗಿದೆವು.. ಕೆಲವೇ ಕ್ಷಣದಲ್ಲಿ ಸೂರ್ಯನ ಪ್ರಕಾಶವು ನಮ್ಮನ್ನು ನೋಡಲಾರಂಬಿಸಿದವು.. ಪದ್ದತಿಯಂತೆ ಸ್ನಾನ ನಿಶಿದ್ದ .. ಒದ್ದೆ ಬಟ್ಟೆಯಲ್ಲಿ ಮೈ ಒರೆಸಿಕೊಂಡು ಬಟ್ಟೆ ಬದಲಾಯಿಸಿ ಸೋಮನಾಥೆಶ್ವರನ ಮಹಾಪೂಜೆಗೆ ಬೇಡಿ ನಿಂತೆವು.. ಆಗ ಸಮಯ ಸರಿಯಾಗಿ ಒಂದು ಗಂಟೆ.. ಮನಸ್ಸು ನಿರ್ಮಲವಾಗಿ ಕಲ್ಮಶಗಳೆಲ್ಲವೂ ಒಮ್ಮೆ ತಟಸ್ಥವಾದವು ..
ಪೂಜೆ ಮುಗಿಸಿ ಪ್ರಸಾದ ಭೋಜನ ಸ್ವೀಕರಿಸಿ ಬಹು ಸಂತಸದ ಅನುಭವದೊಂದಿಗೆ ತೆರಳಲು ಸಜ್ಜಾದೆವು..

ಅಲ್ಲಿಯ ಭಟ್ಟರ ಹೇಳಿಕೆಯಂತೆ ಮಧ್ಯಾನದ ನಂತರ ಯಾರನ್ನೂ ಗುಹೆಯ ಒಳಗಡೆ ಬಿಡುವುದಿಲ್ಲ.. ಆಗ ಸರಿಸೃಪಗಳ ಚಲನ ವಲನಗಳು.. ಒಮ್ಮೊಮ್ಮೆ ಗುಹೆಯಿಂದ ಹೊರಗೆ ಬರುವ ಸಾಧ್ಯತೆಗಳು ಇವೆಯಂತೆ.. ಇದನ್ನೆಲ್ಲಾ ಕೇಳಿ ಮೈ ಜುಮ್ ಎಂದಿತು.. ಆದರೆ ಗುಹೆಯ ಯಾತ್ರೆ ಮಾತ್ರ ಮನದಾಳದಿಂದ ಹೊರ ಎಸೆಯಲು ಸಾಧ್ಯವೇ ಇಲ್ಲ.. ಹೊಸ ಅನುಭವಗಳೊಂದಿಗೆ ನಮ್ಮ ನಮ್ಮಲ್ಲಿ ವಿನಿಮಯ ಮಾಡಿಕೊಳ್ಳುತ್ತ ಮನೆಗೆ ಹಿಂದಿರುಗಲು ಅಣಿಯಾದೆವು.. ನೆಲ್ಲಿ ತೀರ್ಥದಿಂದ ಸುಮಾರು ೧೦-೧೨ ಕಿಲೋ ಮೀಟೆರಗಳ ದೂರದಲ್ಲಿ ಅನಾನಸ್ ಫಾರ್ಮ್ ಹೌಸ್ ಇದೆ.. ಇದರ ಬಗ್ಗೆ ಜನರ ಒಳ್ಳೆ ಅಭಿಪ್ರಾಯ ಕೇಳಿ ಅದನ್ನು ಭೇಟಿ ಮಾಡಲು ಪ್ರಯಾಣ ಮುಂದುವರೆಸಿದೆವು.. ಅಪ್ಪಟ ಅನಾನಸ್ ರಸವು ಸಕ್ಕರೆ ಇಲ್ಲದೆ ಗಂಟಲಲ್ಲಿ ಇಳಿದಾಗ ಮನವು ತಂಪಾಯಿತು.. ಬಿಸಿಲಿನ ಧಗೆಗೆ ನೀರೆರೆಚಿದಂತಾಯಿತು..

ಎಲ್ಲಾ ಬಹು ಸುಂದರ ಅನುಭವಗಳೊಂದಿಗೆ, ಸೂರ್ಯನು ತನ್ನ ಮನೆಗೆ ತೆರಳಿದಂತೆ , ನಮ್ಮ ಮನೆಗಳಿಗೆ ನಾವೂ ತೆರಳಲು ಹೊರಟೆವು.. ನೆನಪುಗಳ ಮೂಟೆಯಲಿ... :) :)

"ನೆಲ್ಲಿ ತೀರ್ಥ " ಎಂಬ ಸ್ಥಳದ ಕುರಿತ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಗೆ ಭೇಟಿ ಕೊಡಿ.. http://www.nellitheertha.com/


ಸತ್ಯದ ಅನಾವರಣ .......


ಭಾವಗಳ ಲೋಕದಲಿ
ಚಲಿಸುತಿರುವೆ ಹಾಯಾಗಿ
ಬೇಗ ಬಂದೆನ್ನ ಸೆಳೆಯಲಿ
ನಾ ಒಬ್ಬ ಏಕಾಂಗಿ

ಲೋಕ ರೂಢಿಗೆ ಮಾಡದಿರು
ಮನುಷ್ಯತ್ವವ ಆವಿ
ಈ ಲೋಕದ ಕಟ್ಟು ಪಾಡಿಗೆ
ನಲುಗಿದಂತ ಜೀವಿ

ಅನ್ಯಾಯ ನರ್ತನವು
ಹಾಳಾಗಿ ಹಳಸಿತದುವು
ನೀತಿ ಮಾರ್ಗಕೆ ಹಿಡಿ ನೀನು
ಹೆಜ್ಜೆ ಗೆಜ್ಜೆಯಾ ತಾಳವನು

ಬಟ್ಟ ಬಯಲಾಯಿತೆ ನಮ್ಮವರ ನಿಜ ಬಣ್ಣ
ಅಸತ್ಯದ ಕನ್ನಡಿಯಲಿ ತೋರಿಹುದೆ ಅಣ್ಣ
ಸತ್ಯವದು ಮೌನವನು ತಬ್ಬಿರಲು
ಮಾತಾಡಿಸಬಾರದೇ ಎ೦ಬಳಲು

ಇರ ಬೇಕು ವದನದಲಿ
ಸಹಸ್ರ ನಗುವಿನ ಜೋಲಿ
ಪ್ರೀತಿ ಪ್ರೇಮ ಸಹಕಾರವೇ
ನಮ್ಮ ಜೀವನವ ಜೀಕುವ ಜೋಕಾಲಿ

ಮಂಗಳವಾರ, ಮಾರ್ಚ್ 6, 2012

ಮನ - ತಲ್ಲಣ







ಮನದಲ್ಲೆದ್ದ ತರಂಗದಲೆಗಳು
ಹೃದಯದಾಳಕ್ಕೆ ಇಳಿದವು
ಎಲ್ಲೆಡೆ ಪಸರಿಸಿ ಮನವ
ತಲ್ಲಣಿಸಿದವು

ಮಾಯಾಲೋಕವು ತನ್ನ
ಅಬ್ಬಾಳಿಕೆ ಸಾಧಿಸುತ್ತಿದೆ
ಕಂಗಾಲಾದ ಮನಸ್ಸು
ಲಜ್ಜೆಯಲಿ ನಾಚುತಿದೆ

ಬಹು ದೂರದಲ್ಲಿ ನಿಂತು
ಕಂಡು ಕಾಣರಿಯದ ರೂಪವು
ನನ್ನನ್ನೇಕೋ ಬಲವಂತದಲಿ
ಕಾಡಿಸುತಿರುವಂತೆ ಭಾಸವು

ಮಿಶ್ರ ರೂಪವು ಮನದಲ್ಲಿ
ಗೋಚಿಸುತಿರಲು
ಸಂತೃಪ್ತಿಯರಸುವಿಕೆಯಲಿ
ನಗುವಿನೊಂದಿಗೆ ಮೌನವು ಸಾಥಿಯಾಗಲು

ಮಂಗಳವಾರ, ಫೆಬ್ರವರಿ 28, 2012

ಹೊಸ-ಭಾವ


ಸೋಲಲ್ಲೂ ಗೆಲುವ ಕಾಣಲು
ಮನವೇಕೊ ನಸುಗನಸ ಕಾಣುತಿದೆ
ಅಳುವಲ್ಲೂ ನಗುವ ಪಸರಿಸಲು
ಮನವೇಕೊ ಹೆಣಗಾಡುತಿದೆ

ಭಾವಗಳು ಮತ್ತೆ ಜೀವ
ತಂತಿಗಳ ಜೋಡಿಸುತಿರಲು
ನವ ರಾಗದ ಶ್ರುತಿಯ
ಹಿಡಿತ ಸಾಧಿಸುತಿರಲು

ಹಳೆ ರಾಗಗಳ ಭಾವೈಕ್ಯದಲಿ
ಹೊಸ ರಾಗವು ಹುಟ್ಟಲು
ಲೋಕಾರ್ಪಣೆಗೆ
ಅಣಿಗೊಳ್ಳುತ್ತಿರಲು

ಮಾಯಾಲೋಕ


ಮನ ಸೋಲುವುದು
ನಿನ್ನೊಂದಿಗೆ ಕಳೆದ ಮಧುರ
ಕ್ಷಣಗಳ ಸಂಚಿಯ ಇಣುಕು ನೋಟಕೆ
ಅಶ್ರುಧಾರೆಯ ಹರಿಸುವುದು
ನೀನಿತ್ತ ಭರವಸೆಯ
ಮಾತುಗಳ ಭಾವುಕತೆಗೆ

ಕಷ್ಟದಲಿ ಇರುತಿರಲು ನೀನು
ನಿಶ್ಯಕ್ತ ಮನಕೆ ಅದು ಗ್ಲೂಕೋಸು ನೀರು
ಲೋಪವನು ಆಕ್ಷೇಪಿಸದೆ
ಭಾವಕ್ಕೆ ಭಾವವನು ಸಂಧಿಸಿ
ಸಮಾಧಾನದ ಉತ್ತರವ ನೀನಿರಿಸಿ
ಕಷ್ಟಕ್ಕೆ ವಿರಾಮವಿರಿಸಿದೆ

ಬಿಟ್ಟು ಹೋದದಕ್ಕೇನು ಕಾರಣವ
ನಾನೆಂದು ಕೇಳೆನು
ಉತ್ತರವೂ ನನ್ನಲ್ಲಿಯೇ ಅಡಗಿ ಕುಳಿತಿರಲು
ಬೇಡೆನಿನ್ನೆನನು ನಿನ್ನಲ್ಲಿ ಜೀವ
ಸತ್ಪತದಿ ತಂದಿರಿಸಿ ನನ್ನನು
ಬರೆದಿರುವೆ ಜೀವನದ ಆಸ್ತಿಯ ಉಯಿಲು

ಸೋಮವಾರ, ಫೆಬ್ರವರಿ 27, 2012

ನೆನಪಿನ೦ಗಳದಿ೦ದ ...........

ಮಾನವೀಯತೆಯು...ಮೀರಲು


ಗುಳಿ ಬಿದ್ದ ಕೆನ್ನೆ
ಮುಖದಲ್ಲಿ ಜೋತ ಚರ್ಮ
ಪ್ರೀತಿ ಮಮತೆಯ ಎದುರು
ನೋಡುತ್ತಿರುವ
ಬಸವಳಿದ ನಯನಗಳು
ಕ್ಷಣ ಹೊತ್ತು ಕಳೆದು
ಕಣ್ಣುಗಳು ಎರಡು ತಂಪಾಗಿ

ಹೆತ್ತವರಿಗೆ ಈ ಧೋರಣೆ
ಸರಿಯೇ?

ಹೊಟ್ಟೆ ಬಟ್ಟೆಗೆ ಕಟ್ಟು
ಹತ್ತಿಸಿದರು ಶಾಲೆಯ
ಮೆಟ್ಟಲು
ಹೊಳೆ ದಾಟಿದ ಮೇಲೆ
ಅಂಬಿಗನ ಮರೆತಂತೆ
ಹೆತ್ತ ತಂದೆ ತಾಯಿಯರಿಗೆ
ಮಾಡುವುದು ಸರಿಯೇ?

ನಿಮ್ಮ ಎಳೆ ವಯಸಲಿ
ತೋರಿದ ಮಮತೆ ಪ್ರೀತಿಗೆ
ಬೆಲೆ ಕಟ್ಟಿಯಾದರು
ಇಳಿ ವಯಸಲಿ ಪ್ರೀತಿಯ
ತೋರಬಾರದೇ?

*************************************************************************************

ಮನದ ಬಯಕೆ


ಮನ ತುಂಬಿ ಬಂದಿರಲು
ಮನವೇಕೋ ಹವಣಿಸುತಿರಲು
ನೆನಪಾಯಿತು ಬಾಲ್ಯವು
ಹರಿಸಿತು ನೀರಿನ ಹೊಳೆಯ

ತಂಪಾದ ಮನ
ಹಳೆ ನೆನಪಿಗೆ ಓಗೊಡುತ್ತ
ನೆನೆಸಿತು ನೆನಪುಗಳ
ಭಾವನೆಗಳ ಸುಳಿಯಲಿ

---------------------

ಮನ ನೊಂದಿತು ನನ್ನಲ್ಲಿ
ನನ್ನನ್ನೇ ಕೇಂದ್ರಿಕರಿಸಿ
ನನ್ನ ಕುರಿತೇ ಬರೆಯುವೆ
ಸಾಕು ನಿಲ್ಲಿಸು ನಿನ್ನ
ದುಃಖ ಭಾವ
ನೆನಪುಗಳ ಲೋಕದಲಿ
ನನ್ನ ಮರೆತು ಸುಖೀ
ಜೀವನ ನಡೆಸು

*************************************************************************************
ಕಂಬನಿಯ ಮಿಡಿತ

ಮತ್ತೆ ಮತ್ತೇಕದೊ ಆ ನೆನಪು
ನನ್ನನೇಕೆ ಕಾಡುತಿದೆ
ಹಳೆ ರಾಗವ ಹೊಸ ರೀತಿಯಲಿ
ಹಾಡಲೇಕೊ ಯತ್ನಿಸಿದೆ

ಭಾವುಕ ಮನ ಮನನದಲಿ
ಇರುತಿರೆ
ಕಣ್ಣುಗಳು ಕಂಬನಿಯ ಮಿಡಿಸಿ
ತಮ್ಮ ಇರುವನು
ತೋರುತಿರೆ

ಬಂದೆ ಬಂದಾವು ಹಳೆ ಕೊರಡಿಗೆ
ಜೀವದ ವರ ಕರುಣೆ
ಕಂಪಿಸದಿರು ಓ ಹ್ರದಯ
ನುಡಿಸದಿರು ರುದ್ರ ವೀಣೆ

*************************************************************************************
ಬಚ್ಚಿಟ್ಟ ನೋವು


ನನ್ನ ಗೆಳತಿ ತುಂಬಾ ಪಾಪದವಳು.ನನಗೆ ಅವಳಿಗೆ ವಯಸ್ಸಿನ ಅಂತರವಿಲ್ಲ. ಹೆಸರು ಸವಿನಯ..ಏನನ್ನೂ ಕೇಳಿದರೂ ಒಲ್ಲೆ ಎಂಬ ಪದದ ಅರ್ಥವೇ ಗೊತ್ತಿಲ್ಲದಂತವಳು.

ಮೊನ್ನೆ ಬಹಳ ಸಮಯದ ನಂತರ ನನ್ನ ಅವಳ ಭೇಟಿ.ಅವಳನ್ನು ಕಂಡಾಕ್ಷಣ ಮನಸ್ಸು ನಮ್ಮ ಹಿಂದಿನ ಭೇಟಿಯ ಕಾಲಕ್ಕೆ ಓಡಿತು.ಸ್ವಲ್ಪ ಸಮಯದ ತರುವಾಯ ಅವಳ ಗುಳಿ ಬಿದ್ದ ಕೆನ್ನೆಗಳು,ಒಡಲಿನ ಬೆಂಕಿಗೆ ಕರಟಿ ಹೋದಂತಿದ್ದ ಆ ಕಣ್ಣಿನ ಕೆಳಭಾಗ ಕಂಡು ಮನಸ್ಸಿಗೆ ಆಘಾತ.ಆ ದಿನದ ಸವಿನಯ ಇವಳಾ???

ಸ್ವಚ್ಛಂಧವಾಗಿ high school,college ಸಮಯದಲ್ಲಿ ಹಾರಾಡುತ್ತಿದ್ದ ಆ ಗೆಳತಿ,ಕನಸುಗಳು ಗರಿ ಬಿಚ್ಚಿ ಹಾರಾಡಬೇಕಾದ ಈ ಸಂಧರ್ಭದಲ್ಲಿ ಯಾಕೆ ಹೀಗಾದಳು??? ಎಂಬ ಪ್ರಶ್ನೆ ಪ್ರಶ್ನಾರ್ಥಕವಾಗಿ ನನ್ನ ಕಣ್ಣಲ್ಲಿ ಗೋಚರಿಸಿತು.

ತುಂಬಾ ಸಂಯಮದ ವ್ಯಕ್ತಿತ್ವದವಳು.ಯಾರೋಂದಿಗೂ ಅಷ್ಟೊಂದು ಸಲುಗೆಯಿಂದ ವ್ಯವಹರಿಸದವಳು.ಆದರೆ ತನ್ನದೆ ಅದ ವಿಶಿಷ್ಟ ಶೈಲಿಯ ಮಾತಿನಿಂದ ನಮ್ಮ ಸ್ನೇಹ ಸಮೂಹದಲ್ಲಿ ಕೇಂದ್ರಬಿಂದುವಾಗಿದ್ದಳು.

ಕುಶಲೋಪರಿಯ ಮಾತುಕತೆ ಆಯಿತು.ಅವಳು ತನ್ನ ಸ್ಮ್ರತಿಪಟಲದ ನೆನಪಿನ ಸುರುಳಿ ಬಿಚ್ಚಲಾರಂಭಿಸಿದಳು.

ಹೆಚ್ಚಿನ ಓದಿಗಾಗಿ ಪಟ್ಟಣ ಸೇರಿದ ಸವಿನಯ ಓದಿನಲ್ಲಿ ತನ್ನದೇ ಛಾಪು ಒತ್ತಿದ್ದಳು.ಓದು successsfully ಪೂರ್ಣಗೊಂಡಿತು.ಆದರೆ ಓದಿನ ಸಮಯದಲ್ಲಿ ಸ್ವಲ್ಪ ಎಡವಿದಳು.ಯೌವ್ವನ ಚಿಗುರುವ ಕಾಲದಲ್ಲಿ ಅವಳ ಮನಸ್ಸು ಒಂದು ಹುಡುಗನೆಡೆಗೆ ವಾಲಿತು.ತುಂಬಾ ಇಷ್ಟಪಟ್ಟಳು.ಮುಂದಿನ ಕಷ್ಟ ಘಳಿಗೆಯ ಅರಿವಿರದೆ;ಅಷ್ಟು ಸಂಯಮದ ಹುಡುಗಿ ಈ ಸ್ಠಿತಿಗೆ ಬರುತ್ತಾಳೆಂದು ಊಹಿಸಿರಲಿಲ್ಲ.ಆದರೆ ಇದು ತಪ್ಪೇ?ಖಂಡಿತ ಇಲ್ಲ..ಆಧುನಿಕ ಯುಗದಲ್ಲಿ ಹುಡುಗ ಹುಡುಗಿಯರ ಸ್ನೇಹ,ಪ್ರೇಮದಲ್ಲಿ ಕೊನೆಗೊಳ್ಳುವ ವಿರಳ ಉದಾಹರಣೆಗಳಲ್ಲಿ ಒಂದಾಗಿ ಹೋದಳು ನನ್ನ ಗೆಳತಿ..!!!

ಮನಸ್ಸು ಲಂಗು ಲಗಾಮಿಲ್ಲದ ಕುದುರೆಯಂತೆ ಓಡಾಡಿತು.ಆದರೆ ಪ್ರಶಂಸಾತ್ಮಕ ಅಂಶವೆಂದರೆ ತನ್ನತನ ಮರೆಯಲಿಲ್ಲ.ಹುಡುಗನ ಅಕ್ಕರೆಯ ಸವಿ ಮಾತುಗಳು ಪ್ರೇಮಲೋಕದಲ್ಲಿ ತೇಲುತ್ತಿದ್ದಳು.ದಿನಗಳುರುಳಿದವು..ಆದರೆ...........ಇಬ್ಬರಲ್ಲು ಮನಸ್ತಾಪದಂತಹ ಅಂಶಗಳು ಬೆಳಕಿಗೆ ಬಂದವು..ಇವಳು ಚಿಂತಾಕ್ರಾಂತಳಾದಳು...ಪಾಪ..
ಯಾವುದೆ ಸಂಬಂಧದಲ್ಲಿ ಹೊಂದಾಣಿಕೆ,ಪ್ರೀತಿ ಇಲ್ಲದಿದ್ದರೆ ಜಗಳ,ಕೋಪ,ಮನಸ್ತಾಪಗಳು ಸಾಮಾನ್ಯ. ನನ್ನ ಮನಸ್ಸು ಸವಿನಯ ಹಾಗು ಅವಳ ಹುಡುಗನ ಸಂಬಂಧದಲ್ಲಿ ಆದ ಬದಲಾವಣೆಗೆ ಕಾರಣರಾರು??ಎಂಬ ಪ್ರಶ್ನೆಗೆ ಉತ್ತರಕ್ಕಾಗಿ ಅವಳನ್ನೆ ನೋಡುತ್ತಿತ್ತು.ಅವಳ ಕಣ್ಣುಗಳು ತನ್ನದೇ ಇರಬಹುದೆಂಬ ಕಳವಳದಲ್ಲಿ ನಿಸ್ತೇಜವಾಗಿ ನನ್ನನ್ನೇ ದಿಟ್ಟಿಸಿದವು..
ಪ್ರೀತಿಯ ಸೆಳೆತ ಕಂಡಿತು ಆ ಕಣ್ಣಲ್ಲಿ......
ಬೇರೆ ಕೆಲಸ ಇದೆಯೆಂದಾಕ್ಷಣ bye ಎಂದಿತಾದರು ಮನಸ್ಸು ಅವಳನ್ನು ಇನ್ನೊಮ್ಮೆ ಭೇಟಿಯಾಗಿ ಅವಳನ್ನು ಆ ಮಯಲೋಕದಿಂದ ಹೊರತರಬೇಕೆಂದು ನಿರ್ಧರಿಸಿದೆನು..ಮನಸ್ಸು ಮನಸ್ಸುಗಳ ಪರಿಹಾರ ಯಶಸ್ವಿಯಾಗುವುದೆಂಬ ಹಂಬಲ.:-)



"ಆರಾಮಾಗಿ ಇದ್ದೆ ನಾನು
ನಿನ್ನ ಕಂಡು ಅರೆ! ಏನಾಯಿತೊ
ಅರೆ! ಏನಾಯಿತು..ಅಲೆ ಜೋರಾಯಿತು..
ಬಾಳು ಸಿಹಿಯಾದ ಅಪಘಾತವಾಯಿತು..
ಮರು ಮಾತಾಡದೆ ಖುಷಿ ನೂರಾಯಿತು..
ಈ ವ್ಯಾಮೋಹ ವಿಪರೀತವಾಯಿತು...." ಹಾಡೊಂದು ನೆನಪಾಯಿತು........:-):-)

*************************************************************************************
ಜೀವನದ ಉಕ್ತಿ

ಮರೆತೆ ನಲಿವ
ಗತ ಘಳಿಗೆಯ ನೆನಪಲಿ
ಇಂದು ತಂದ ಹೊಸ
ಉಲ್ಲಾಸವ
ಮರೆತು ನಿಂತೆ ದೂರದಲಿ



ಬತ್ತಿದೆಯಲಿ ಬಿತ್ತು ನೀನು
ಪ್ರೀತಿ ಕರುಣೆ ಸೌಹಾರ್ದತೆ
ತುಂಬಿಸೆಲ್ಲವ ಕಲಿತ ಪಾಠವ
ಜೀವನದ ಹೊತ್ತಿಗೆಗೆ

ಎದುರಿಸುವ ಛಲ
ನಿನ್ನಲಿದ್ದರೆ
ನೀನು ಸದಾ ವಿಜಯಶಾಲಿ
ಕೂತು ನೀನು ಮರುಗಿದರೆ
ನಿನ್ನಂತ ಮೂರ್ಖರಿಲ್ಲವೋ
ಓ ಬಡಪಾಯಿ

ನಂಬಿಕೆಯಲೇ ಬಾಳು
ನೀನು ಕಾಲದ ಆಳು
ಮರುಗುವ ಮನಕ್ಕೆ ಹೇಳು
ಮಾಡದಿರು ಜೀವನವ ಹಾಳು

ನಗುವು ಸಂತೋಷದ ಸಂಕೇತ
ಅಳುವು ಹೇಡಿಯ ಧ್ಯೋತಕ
ತಿಳಿ ಮನದಿ ನಗು ಮುಗದಿ
ನವ ಜೀವನದ ಆದಿ

*************************************************************************************
ಮರಳಿ ಶಾಲೆಗೆ



ಮರಳಿ ಶಾಲೆಗೆ
****************
ಮುಂಜಾನೆ ಎದ್ದು
ಸೂರ್ಯನ ಕಿರಣಕ್ಕೆ
ಮುಖವೊಡ್ಡಿ ನಿಂತು
ಆಗಸವ ನೋಡಿದರೆ
ಮನವು ಪುಟಿಯುವ
ಪುಟ್ಟ ಕರುವಂತೆ
ಜಿಗಿಯುವುದು
ದಿನದ ಸಾಧನೆಗೆ
ಪ್ರೇರೇಪಿಸುವುದು
--------------------
ಬೆನ್ನಲ್ಲಿ ಪಾಟಿಚೀಲ
ಸಮವಸ್ತ್ರ ಧಾರಣೆ
ಅಣ್ಣ ತಂಗಿಯ ಕೈಯ
ಹಿಡಿದು ನಡೆಯುತಿರಲು

ಬಲು ಆಸೆಯು ನನಗೆ
ಚಿಕ್ಕವಳಾಗಿ ಕಲಿಯಲು
ಮತ್ತೆ ಕರೆಯುವುದೇ ಶಾಲೆಯು ನನ್ನ
ಓಡೋಡಿ ನಾ ಬರುವೆ

*************************************************************************************
ಸಾವು - ಗುಟುಕಾ . . . . .

ಸಾವಿನ ಮನೆಯ ಹೊಸ್ತಿಲ
ತುಳಿದುರುವ ಮಾನವನೆ
ಹೆಜ್ಜೆ ಹಿಂದಿಡು
ಕತ್ತಲೆಯ ಜಾಡಿಗೇಕೆ
ಆತುರತೆ




ಕೈಯಲ್ಲಿ ಹಿಡಿದ ಜರ್ದಾ ಪಾಕೆಟ್
ದವಡೆಯ ಕತ್ತರಿಯ ಬಳಕೆ
ಜೀವ ತೆಗೆಯುವ ಮಾದಕ ತಂಬಾಕು
ಬಾಯೊಳಗೆ


ಬಾಯಲ್ಲಿ ದುರ್ನಾತ
ಮುಖದಲ್ಲಿ ಖಿನ್ನತೆಯ ನಗು
ಕಂಡ ಕಂಡಲ್ಲಿ ಉಗುಳು ಚೆಲ್ಲುವ
ಅನಾಗರೀಕ ಈಗಲಾದರು ಎಚ್ಚೆತ್ತುಕೋ

ನಿನ್ನ ಕೇಳದೆ ಬಂದೆ ಬರುತ್ತೆ ಅರ್ಬುದ
ನೀ ಹೋಗು ಎನ್ನುವ ಕರೆ
ಕೇಳದ ಕಿವುಡ
ನಿಲ್ಲಿಸಿನ್ನು ಬೇಜವಾಬ್ದಾರಿಯುತ ವರ್ತನೆ
ಏನಕ್ಕೋಸ್ಕರ ನಿನಗೆ ನೀನೆ
ಕೊಡುವೆ ದೇಹ ದಂಡನೆ

ಬೀಡಿ, ಸಿಗರೇಟು, ಜರ್ದಾ,ಗುಟುಕಾ, ಮದ್ಯ
ಚಟವು ಚಟ್ಟದ ಸುಲಭದ ದಾರಿಗಳು
ಉತ್ತರೋತ್ತರದ ಯಶಸ್ಸಿನ ದಾರಿ ತಿಳಿದುರವ
ನರ ಮಾನವ ಸಾವಿನೆಡೆಗೆ ಏಕೆ ದೀಪಗಳು


ಚಂದ ಸುಂದರ ಬಾಳ್ವೆಯು
ಜೀವನದ ಏಳ್ಗೆಯು
ಮನ ವದನಕೆ ತುಂಬು ನೀ ಚೈತನ್ಯವ
ದೇಹದ ಜೀವಕೆ ಕೊಡದಿರು
ಜೀವ ಹಿಂಡುವ ಯಾತನೆಯ

*************************************************************************************
ಬದುಕು -ಹೀಗೆಯೆ??


ಬದುಕೆಂಬ ಮದುವೆಯ ಮಂಟಪಕೆ
ನವ ವಧುವಿನಂತೆ
ಮೆಲ್ಲ ಮೆಲ್ಲನೆ ಹೆಜ್ಜೆ ಇಡುತಿರಲು
ಭಾವನೆಗೆ ನೂರೆಂಟು ಕನ್ನಡಿಯ
ನೀ ಹಿಡಿದು ಸಾಗುತಿರಲು

ಬಾಲ್ಯವನು ತಾ ಬಿಟ್ಟು
ಚಂಚಲತೆಗೆ ಬೆನ್ನಿರಿಸಿ
ಹೆತ್ತವರಿಂದ ದೂರ ಹೋಪುವ
ಕಾಲವಿದು
ಸ್ಥಿರ ಮನಕೆ ಅಡಿಪಾಯ
ಎಲ್ಲ ಬಂಧನವ ತೊರೆದು ಹೊರಟಿರಲು

ಬಂದೆ ಬರುತಾವೆ ಕಾಲ
ಏನಾದರು ಬಿಡದಿರು ಛಲ
ಬಾಲ್ಯವದು ಕಳೆಯುತಿರೆ
ಯೌವ್ವನವು ಕರೆಯುತಿರೆ
ಚಂದ ಬಾಳ್ವಿಕೆಗೆ

*************************************************************************************
ಕಳೆದು-ಹೋಯಿತು

ಬಾ ನನ್ನ ಮಧುರ ತರಂಗ
ಬಾ ನನ್ನ ಹತ್ತಿರಕೆ
ನಿನ್ನ ಕಾಣದೆ ಬೇಸರಿಸಿ ಬೆಂದಿರುವೆ
ಕಾಯಿಸಬೇಡವೆ ಇನ್ನುಕೆ

ಬೊಗಸೆಯಲಿ ನೀಡಿದದನು
ಕಸಿದಿಕೊಳ್ಳುವುದು ಧರ್ಮವೇ
ನನ್ನ ನೀ ದೂರ ಕಳಿಸಿ
ಕೇಳದಂತೆ ಮಾಡಿದೆಯಾ ನಿನ್ನ ಧ್ವನಿ

ನಿನ್ನೊಂದಿಗೆ ನುಡಿಸಿದ
ಅದ್ಭುತ ಕಾವ್ಯದ ಸುರಗಾನ
ಆರ್ತನಾದಂತೆ
ಕೇಳಿಸುತ್ತಿದೆ

ಕಣ್ಣೀರ ಕೋಡಿಯ
ಹರಿಸದಿರು
ಭಾವುಕತೆಯಲೆ ಜೀವ ತುಂಬಿದೆ
ಬೇಗ ಬಂದೆನ್ನ ಸಂತೈಸು

ದೂರ ನೂಕದಿರು ನನ್ನ
ದೂರ ಮಾಡದಿರು ನನ್ನ
ನಿನ್ನ ಸಂಗದಿಂದಲಿ
ಅರ್ಥಹೀನ ಜೀವನಕ್ಕೆ
ನಾಂದಿ ಹಾಕಬೇಡ

*************************************************************************************
ಮೌನ ಮತ್ತು ಮನಸ್ಸು



ಮೌನ ಮಾತಾಡಿತು
ಮನವೇಕೆ ನನ್ನ ಕರೆಯಿತೆಂದಿತು
ಉತ್ತರವು ಸಿಗದೆ
ಮೌನವು ಮೌನವಾಯಿತು

ಪ್ರೀತಿಯಿಲ್ಲದೆ ಬಳಲಿದ
ಮನ ಮೌನವ ಕರೆಯಿತೇ?
ಪ್ರೀತಿಯಲಿ ಮುಳುಗಿದ
ಮನ ಪ್ರೀತಿ ಕಾಣದಾಗ
ಪ್ರೀತಿಯ ಅರಸಿತೇ?

ಏಕೆ ಮೌನವಾದೆ ಮನವೆ
ನನ್ನೋಡನೆ ಮಾತನಾಡಬಾರದೆ
ಎಂದನ್ನಿತು ನಗೆಯು
ತುಸುನಗೆಯು ಮೂಡಿ
ನೀರಿನ ತರಂಗದಂತೆ
ಮಾಯವಾಯಿತು

ಮೌನವ ತಬ್ಬಿದ ಮನ
ಪ್ರೀತಿಯ ಭಾವಕೆ
ಮರುಗುತ್ತಿದೆಯೆ
ಏನೂ ತಿಳಿಯದ ಗೊಂದಲದ ಮನವು
ಮೌನಕ್ಕೆ ಶರಣಾಯಿತು

*************************************************************************************
ಇಲ್ಲ-ತಲೆಬರಹ
ಕೈಯಲ್ಲಿ ಮೊಬೈಲು
ಕಿವಿಯಲ್ಲಿ ಇಯರ್ ಫೋನು
ಹಾಡೊಂದು ತನ್ನ ಪಾಡಿಗೆ
ಹಾಡುತಿರಲು

ತಲೆಯಲ್ಲಿ ನಾನಾ ವಿಚಾರಗಳು
ತಿರು ಪ್ರಶ್ನೆಗಳು ಮನಕೆ
ನಾನಾ ಅದುವಾ
ಹಾಡು-ವಿಚಾರ

ಎಲ್ಲೊ ಮಳೆಯಾಗಿದೆಯೆಂದು
ಎಲ್ಲೋ ಮನ ಜಾರಿದೆಯೆಂದು
ಮನವದು ಹೋಲಿಸುತಲಿಹುದು
ಹಾಡನು ಭಾವನೆಯನು

ರೆಪ್ಪೆಯ ಮುಚ್ಚಲು
ಕಣ್ಣದು ನೋಡಿತು
ಸ್ವಪ್ನವನು

ಕಣ್ಣಲಿ ಕಂಡಿತು
ಮಿನುಗುವ ಮಿಂಚದು
ಹೋಲಿಸಿತು ಇದನು
ಭಾವಾರ್ಥದಲಿ

*************************************************************************************
ಬಂಧಿ


ನೆನಪುಗಳ ಸೆರೆಮನೆಯಲ್ಲಿ
ನಾನು ಬಂಧಿತೆ
ಹೊರ ಬರಲು ಕಾಯುತಿರುವೆ
ಜಾಮೀನು ಹೇಳಿಕೆ

ಅತ್ತ ಅಳಲು ಬಾರದೆ
ಅತ್ತ ನಗಲು ಬಾರದೆ
ಭಾವಗಳ ಸರಳುಗಳಲಿ
ಹಿಡಿಯಲ್ಪಟ್ಟಿರುವೆ

ಬೇಡುತಿರುವೆ ದೇವನಲಿ
ಬಿಡಿಸೆನ್ನನು ಈ ಬಂಧನದಿ
ಕೊಡು ನೀನು ಜಗವ ಎದುರಿಸುವ
ಚಲ ಭಲ
ನೆಮ್ಮದಿ

*************************************************************************************
ಹೊಗೆ..ಬದುಕು..



ಎಲೆ ಮಾನವ
ನಿನ್ನ ನೀನೆ ಹೊಗೆಯ ಬಲೆಗೆ
ನೂಕುತ್ತಿರುವೆ
ಸಾವಿಗಂಚಿನ ಕನ್ನಡಿಯ
ತೋರಿ ಮರೆಮಾಚುತಿರುವೆ


ಬೇಕಿಲ್ಲವೆ ಚಂದ ಚೊಕ್ಕದ
ಪ್ರಶಾಂತ ಹ್ರದಯ
ಕೆಟ್ಟ ರಕ್ತದ ಜೊತೆ ಬೇಕಿತ್ತೆ
ನರಳಾಟ

ಗೊತ್ತಿರುವುದು ನಿನಗೆ
ಸಾವು ಖಚಿತವೆಂದು
ಬೇಕಂತಲೆ ಕರೆಯುತಿರುವೆ
ಬಾ ಬೇಗ ನನ್ನ ಬಳಿಗೆ ಎಂದು


ಹೊಗೆಯ ನಡುವಿನಲಿ ಬದುಕು
ಹೇಗೆ ಕಂಡೀತು ಚೆಲುವು
ಮಸುಕಿನ ಚಿತ್ರಣದ ಹೊರತು
ಬೇರೆನು ಕಾಣದು


ತೆರೆ ಮರೆಯ ಪರದೆಯ
ಒಮ್ಮೆ ನೀನು ತೆರೆದು ನೊಡು
ನಿನ್ನ ನೀನು ಮರೆಯಬೇಡ
ಚೊಕ್ಕಣದ ಪುಟದಲಿ ನೋಡು ನಿನ್ನ


ರೋದಿಸುವ ಮನಕೀಗ ಬೇಕಿಲ್ಲ
ಹೊಗೆಯ ಸಾಂತ್ವಾನ
ನೊಂದವಕೆ ಕೋಡು ನೀನು
ಹೊಗೆ ರಹಿತ ಜೀವನ

*************************************************************************************
ನಾನು-ರೋಬೋಟ್-ಹುಡುಗಿ



ಭಾವನೆಗಳ ಸಮ್ಮಿಳಿತಕೆ
ಭಾರವಾಗಿದೆ ಮನಸು
ತುಸು ನಗುವು ಮುಖ ತುಂಬ
ಕಂಬನಿಯು ಜಾರುತಿರೆ
ಕೂಗಿ ಕರೆಯಿತು
ಅಪ್ಪುಗೆಯ ಬಂಧನವ


ಬೇಕೆನಿಸಿದೆ ಪ್ರೀತಿಯ
ಬೊಗಸೆಯ ನೋಟ
ಸಾಕೆನಿಸಿದೆ ಬಯಲೊಳು
ಗುರಿ ಇಲ್ಲದ ಓಟ

ರೋಬೋಟಿನಂತೆ
ದಿನ ಬೆಳಗಿನ ದಿನಚರಿ
ಭಾವನೆಗಳಿಲ್ಲದ ಮನವು
ಕೊರಗುತಿದೆಯೆ

ಬಾ ಎಂದು ಕೂಗಿಗೆ
ಮನ ಕರಗೀತೆ
ಸದ್ದಡಗಿ ಕೂತಿದೆ
ಕರಗಳ ಸ್ವರ ಗೀತೆ

*************************************************************************************
ಸಂಕೋಚ

ತಳಮಳ
ಮನದ ಬೇಗೆಯನು ಹೇಳಿಕೊಳ್ಳಲು
ಕಳವಳ

ಕೂತು ಬಿಡುವೆನು ಏಕಾಂತ ಸಿಗಲು
ಬೇಕಿಲ್ಲ ಯಾರು
ಮಧುರ ಸಂಗೀತ ಸಾಥ ನೀಡಲು

ಚಂಚಲತೆಯ ಪ್ರತಿಬಿಂಬದ ರೂಪವನು ಬಿಂಬಿಸುತ
ತಡೆಹಿಡಿದ ಭಾವನೆಗಳ
ತಡೆ ರಹಿತ ಚಲನವೆ ಇದು


ಇದುವೇ???

ಕತ್ತಲೆಯಲಿ ಬೆಳಕೊಂದು ಮೂಡಿದೆ
ಅದ ಹಿಡಿಯಲು ನಾ ಓಡುತಿರೆ
ಮಾಯಾವಿಯ ಲೋಕವೇ ಇದು???

ಹುಚ್ಚು ಮನವು ಬಯಸುತಿದೆ
ಹಕ್ಕಿಯಂತೆ ಹಾರಾಡಲು
ವಿಸ್ಮಯತನದ ರೂಪವೇ ಇದು???

ಬರಡಾದ ಮನವು
ಓಯಸಿಸನ ಎದಿರು ನೋಡುತಿದೆಯೆ
ನಿರೀಕ್~ಷೆಯ ಹಂಬಲವೇ ಇದು???

ಅಪೇಕ್ಷೆ

ಕೂಗುತಿಹುದು ಮನದ ಗಡಿಯಾರ
ಎಚ್ಚರದ ಘಂಟೆಯನು ನೆನಪಿಸುತ

ಬದುಕುವುದು ಮೂರು ಕ್ಷಣ
ಅದರಲ್ಲಿ ಜಿಪುಣುತನ
ಲೋಕದ ನೀತಿಯು
ಪ್ರೀತಿ ಪ್ರೇಮ ಪ್ರಣಯವು

ಅಲ್ಲಿ ನೋಡು ಅವನೆಂದು
ಬೆಟ್ಟು ಮಾಡಿ ತೊರಿದರೆ
ಉಳಿದ ಬೆರಳುಗಳೆಲ್ಲವುಗಳು
ನಿನ್ನನೆ ನೊಡುತಿರೆ

ಧಾವಿಸದಿರು ಓ ಚಿನ್ನ
ಬಾ ಬೇಗ ಬೆಳಕಿನೆಡೆ
ತಾಳಿದವನು ಬಾಳಿಯಾನು
ಎಂಬುದರ ನೆಲೆ ಕಾಣು
ಮಾನವೀಯತೆಗೆ ಬೆಲೆ ನೀಡು
ಅನುಸರಿಸು ಕರುಣೆ ಒಲವಿನ ನೀತಿಯನು

ಏನೆಂಬುದು?

ಯಾರು ಬಲ್ಲರು ಮನವ
ಏಕತೆಯ ಬಲವ
ತಾನು ತನ್ನದು ಎಂಬಿದರ ಗೋಡೆಯಲಿ
ಕತ್ತಲೆಯ ಎದುರಿಹರು
ಜನರೆಲ್ಲ

ತಾನು ತನದೆಂಬುದೇನಿಲ್ಲ
ಇಡು ನೀ ವಿಶ್ವಾಸವ ಮನುಜರೊಡನೆ
ತರ್ಕಕ್ಕೆ ನಿಲುಕದ ಮಾತುಗಳು ನೂರು
ಅರಿ ಅದರ ಭಾವುಕತೆಯ ತಿರುಳು
ಇಡು ಮುಂದೆ
ಅದ ನೀ ತಿಳಿದು

*************************************************************************************


ತಣ್ಣನೆಯ ಗಾಳಿ


ಗಾಳಿಯು ಬೀಸುತಿದೆ
ತಣ್ಣನೆಯ
ಆರೋಹಣದೆತ್ತರದಲಿ
ತಣ್ಣನೆಯ

ಹಕ್ಕಿಗಳ ಕಲರವ
ಗೂಡು ಸೇರುವ ಹೊತ್ತು
ಸೂರ್ಯನು ಇಳಿಯುವ
ಮುಸ್ಸಂಜೆ ಹೊತ್ತು
ಗಾಳಿಯು ಬೀಸುತಿದೆ

ಹಾರುವ ಗರಿಗಳು
ಕೂಗುವ ಸ್ವರಗಳು
ಮನವ ತಣಿಸುವ
ಸಂಜೆಯ ಹೊತ್ತು
ಗಾಳಿಯು ಬೀಸುತಿದೆ


ಕಪ್ಪು-ಬಿಳಿಪು



ಇಂದಿನ ರಾಜಕಾರಣವು
ಕಪ್ಪು-ಬಿಳುಪಿನ ಪರದೆಯಾಟ
ಎಂದಿಗೂ ಇದಕಿಲ್ಲ ಮುಕ್ತಿ
ಕೊಡು ತಾಯೆ ಇದ ಎದುರಿಸುವ ಶಕ್ತಿ

ಮರೆ


ಮನಸಿನಾಳದ ನೋವ
ಹೇಳಿಕೊಳ್ಳಲಿ ಎಲ್ಲಿ
ತತ್ತರಿಸಿದೆ ಮನ
ಬಾಳ ಬೆಂದಾಟದಲಿ
ಕೊರಗುತಿದೆ ಈ ನನ್ನ ಅಂತರಾಳ
ಕಂಬನಿಯ ಹೊರಗಟ್ಟದೆ

ಬಾಳ ಯಾತನೆಯನು
ಹೇಗೆ ಬಚ್ಚಿಡಲಿ ಎದುರಿಗೆ
ಒಡಲ ಬೆಂಕಿಯ ನಂದಿಸಲು
ನಲುಮೆಯ ಅಕ್ಕರೆಯ ಸಾಂತ್ವನ ಬೇಕಿದೆ

ಬಯಸುತಿದೆ ಪ್ರೀತಿ ತುಂಬಿದ ಹ್ರದಯ
ಆದರೆ ಎಲ್ಲೆಡೆಯು ತೋರುತಿದೆ
ಪ್ರೀತಿಯ ಮೊಗವಿರಿಸಿದ ಹ್ರದಯ
ಬೇಕಿಲ್ಲ ಇನ್ನೀಗ ಮನಕೆ ಮುದ ನೀಡುವ ಶಾಂತ
ಹಾರಾಡಬೇಕಿದೆ ಆಕಾಶದಲಿ ಹಕ್ಕಿಯಂತೆ ಈಗ


ಓ ನನ್ನ ಅಂತರಾತ್ಮ- ಜೀವ



ಎಲ್ಲಿ ಮರೆಯಾದೆ ಓ ಜೀವ
ನನ್ನನ್ನು ಕಾಯುತ್ತಿದ್ದ
ನನ್ನ ಸಂತೋಷದ ಸ್ಪೂರ್ತಿಯ ರೂಪ
ಬದುಕಿನ ಜಂಜಾಟದ ಬೇಗೆಯ ಚಿಂತಿಸದೆ
ಚಂಚಲವಾಗಿದ್ದ ಮನ
ಈಗ ಒಂಟಿಯಾಗಿದೆ

ತಾಸುದ್ದ ಕೂತು ಕಂಡಿದ್ದ ಕನಸು
ನಿಮಿಷದುದ್ದಕ್ಕೂ ಆಡಿದ ಮಾತು
ಕಣ್ಣಿನ ಮುಂದೆ ನನ್ನನ್ನೆ ಅಣಕಿಸುತ್ತಿದೆ

ಕಣ್ಣಲ್ಲಿ ಕಣ್ಣಿಟ್ಟು
ಕೈಯಲ್ಲಿ ಕೈಯ್ಯಿಟ್ಟು ಕೊಟ್ಟ ಭರವಸೆ
ನನ್ನ ಬಿಟ್ಟು ದೂರ ಹೋದಂತೆ ಅನಿಸುತ್ತಿದೆ

ಮಗುವಿನಂತೆ ಮಡಿಲಲ್ಲಿ ಮಲಗಿ
ಮಕ್ಕಳಾಟ ಆಡಿದ್ದು
ಕಣ್ಣಿಂದ ದೂಅ ಸರಿಯುತ್ತಿದೆ

ಎಲ್ಲದಕ್ಕೂ ಸ್ಪೂರ್ತಿಯ ಸೆಲೆಯಾಗಿದ್ದ ಓ ನನ್ನ ಜೀವವೆ
ನನ್ನ ಅಂತರಾತ್ಮವೆ
ಎಲ್ಲಿ ಮರೆಯಾದೆ


ಪ್ರಾರ್ಥನೆ


ಶಿರವ ಬಾಗಿಸಿಹೆನು ನಿನ್ನಡಿಗೆ
ತರಲಿ ಬಾಳಿನಲಿ
ಸಂತಸದ ಹೊನಲು ನಗೆ
ಮುಸುಕಿದೆ ಮತ್ಸರ ಗುದ್ದಾಟದ ಬಲೆ
ತೂರಿ ಬೀಸುತಿಹರು ಸೆಳೆಯಲು
ಪ್ರೀತಿ ತುಂಬಿದ ಜೀವಗಳನು
ಓ ನನ್ನ ಗೆಳತಿ
ಎಚ್ಚರ

*************************************************************************************

ಮುಪ್ಪು-ನನ್ನ ಅನಿಸಿಕೆಗಳು




ಕೈಯಲ್ಲಿ ಊರುಗೋಲು, ಮಾಸಿದ ಬಟ್ಟೆ, ಕಣ್ಣಿಗೆ ದಪ್ಪ ಕನ್ನಡಕ , ಕೈ ಕಾಲುಗಳು ನಡುಗುತ್ತಿದ್ದರೂ ಸಂಜೆಯ ವಿಹಾರಕ್ಕೋ ಸಾಮನು ಖರೀದಿಗೋ ಬರುವ ಅಜ್ಜ-ಅಜ್ಜಿಯಂದಿರನ್ನು ನೋಡಿದರೆ ಮನ ಸಂಕಟಗೊಳಗಾಗುತ್ತೆ. ಸಣ್ಣ ಪುಟ್ಟ ಕಾಯಿಲೆಗೆ ನಮ್ಮ ಶಕ್ತಿ,ಆಸಕ್ತಿ ಕಳೆದುಕೊಳ್ಳುವ ನಾವು ಅವರನ್ನು ನೋಡಿ ನಾಚಿಕೆಗೊಳಬೇಕಷ್ಟೆ.

ನಮ್ಮ ಅಜ್ಜ-ಅಜ್ಜಿಯಂದಿರನ್ನೆ ಉದಾಹರಣೆಗೆ ತೆಗೆದುಕೊಂಡರೆ ಅವರು ಮನೆಯಲ್ಲಿ ಚಟುವಟಿಕೆಯಲ್ಲಿ ಲವಲವಿಕೆಯಲ್ಲಿ ತಾವಿನ್ನು ಮುಪ್ಪಿನಾವಸ್ಥೆಗೆ ತಲುಪಿದ್ದೆವೆ ಅನ್ನೊದನ್ನೆ ಮರೆತಿರುವಂತೆ ಇರುತ್ತಾರೆ. ಊಹೆಗು ನಿಲುಕದ ವಿಚಾರಗಳು ಸುಳಿದಾಡುತ್ತವೆ. ಅವರ ಮುದಿತನ ಕೆಲಸ ಕಾರ್ಯಕ್ಕೆ ಸ್ಪಂದಿಸದಿದ್ದರೂ ತಮ್ಮ ಸಹಾಯ ಹಸ್ತ ಹೊಂದಿಸಲು ಹೆಣಗಾಡುತ್ತಾರೆ. ತಮ್ಮ ಅಸಹಾಯಕತೆಗೆ ಕೊರಗುತ್ತಾರೆ.


ಮರೆವು ಮುಪ್ಪಿನ ಸಂಗಾತಿ. ಹಳೆಕಾಲದ ನೆನಪುಗಳು ನಿನ್ನೆಯ ನೆನಪಿನಂತಿರುತ್ತವೆ,ಈಗಿನ ನೆನಪುಗಳು ನೆನಪಿನ ಆಳಕ್ಕೆ ಇಳಿಯುವುದಿಲ್ಲ. ಆದರೆ ನಮ್ಮ ಕಾಲಮಾನಕ್ಕೆ ಮುಪ್ಪು ಅನ್ನೊದು ೪೦ ರ ಆಸು ಪಾಸಿನಲ್ಲಿ ಬರಬಹುದೆಂಬ ಹೇಳಿಕೆ :)

ತಮ್ಮ ಮನೆಯ ಮಕ್ಕಳ,ಮೊಮ್ಮಕ್ಕಳ ಉನ್ನತಿ,ವಿದ್ಯಾಭ್ಯಾಸಗಳ ಕುರಿತು ತಮ್ಮ ಆಜು ಬಾಜುವಿನ ಮನೆಯವರಿಗೆ ಹೇಳುವ ಪರಿ ಮನಸಿಗೆ ಮುದ ನೀಡುತ್ತವೆ. ಆದರೆ ಒಮ್ಮೊಮ್ಮೆ ತಮ್ಮ ಮುಪ್ಪಿನ ಬಗ್ಗೆ ಕೊರಗುವುದನ್ನು ಕಂಡು ಬೇಸರವಾಗುತ್ತದೆ. ಕಷ್ಟ ಕಾಲಗಳು ದೂರವಾಗಿ ಮನಸ್ಸು ನೆಮ್ಮದಿಯಿಂದ ಬದುಕುವ ಕಾಲದಲ್ಲಿ ಮುಪ್ಪು ಆವರಿಸಿ ಅವರ ಬದುಕುವ ಚೈತನ್ಯವನ್ನು ಕಸಿಯುತ್ತದೆ. ದೈಹಿಕ,ಮಾನಸಿಕ ಕಾರಣೀಭೂತಗಳು.

ಇನ್ನೋಂದೆಡೆ ,ವ್ರದ್ಧಾಶ್ರಮದಲ್ಲಿ ತಮ್ಮ ಕೊನೆಯ ಕ್ಷಣಗಳನ್ನು ಎಣಿಸುವ ತಾತ ಅಜ್ಜಿಯರನ್ನು ನೋಡಿದರೆ ಕಣ್ಣಲ್ಲಿ ತನ್ನಿಂದ ತಾನೆ ಕಣ್ಣೀರು ಹರಿದು ಕಣ್ಣು ತೇವಗೊಳ್ಳುತ್ತದೆ. ಚಿಕ್ಕಂದಿನಲ್ಲಿ ತಮ್ಮ ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳನ್ನು ಉನ್ನತೋತ್ತಿಗೆ ಏರಿಸಿದವರನ್ನು ಮನೆಯಿಂದ,ಮನಸ್ಸಿಂದ ಹೊರದೊಬ್ಬುವ ಜನರಿಗೆ ಮನಸ್ಸು ಕ್ರೂರ ಭಾವನೆ ತಾಳುತ್ತದೆ. ಸುಖದ ಉಪ್ಪರಿಗೆಯಲ್ಲಿ ಇರುವಂತೆ ಮಾಡಿದ ದಿವ್ಯ ಚೈತನ್ಯಗಳಿಗೆ ಕತ್ತಲೆಯ ಜೀವನ ಒದಗಿಸುವುದು ನ್ಯಾಯವೇ???

ಪ್ರಕಟನೆ:
ಮನಸ್ಸಿಗೆ ಅನಿಸುವುದನ್ನು ಪ್ರಕಟಿಸುವುದು ತುಂಬಾ ಕಷ್ಟ ಆದರೂ ಚಿಕ್ಕ ಪ್ರಯತ್ನ.

ಕೊನೆಯಲ್ಲಿ ಒಂದು ಮಾತು.. ಇದ್ದಷ್ಟು ದಿನ ಮಾನವೀಯತೆಯಿಂದ ಬದುಕುವುದು ಲೇಸು. ಬದುಕಿ, ಬೇರೆಯವರಿಗೂ ಬದುಕಲು ಬಿಡಿ.

*************************************************************************************
ಮಳೆಗಾಲದ ಒಂದು ದಿನ...




ಮಳೆಯ ಸೊಬಗನ್ನು ಮನೆಯ ಬಾಲ್ಕನಿಯಲ್ಲಿ ನಿಂತು ನೋಡುತ್ತಿರುವ ಸಮಯ.ಆಗಸದಿಂದ ಮಳೆಯ ಹನಿಗಳು ಟಪ ಟಪ ಎಂದು ಭೂಮಿಗೆ ಮುತ್ತಿಕ್ಕಿ ಗುಂಪುಗೂಡಿ ಒಟ್ಟಾಗಿ ಹರಿಯತೊಡಗಿದವು.ಕನ್ನಡ ಶಾಲೆಯ ಗುರುಗಳು "ಮಳೆಗಾಲದ ಒಂದು ದಿನ"ದ ಬಗ್ಗೆ ಬರೆದು ತರಲು ಆಜ್ಣಿಸಿದ್ದು ನೆನಪಾಗಿ ಭೂತಕಾಲದ ನೆನಪುಗಳಿಗೆ ಓಗೊಟ್ಟಿತು :)ಅಮ್ಮನ ಸಹಾಯಗೂಡಿ ಒಂದು ಪುಟದಲ್ಲಿ ಮಳೆಗಾಲದ ಒಂದು ದಿನದ ಮಜಾವನ್ನು ಬರೆದು,ಗುರುಗಳಿಂದ ಶಹಭಾಶಗಿರಿ ಖುಷಿ ತಂದಿತ್ತು.

ಮಳೆಗಾಲ ಶುರುವಾಗಲು,ಶಾಲಾ-ಕಾಲೇಜುಗಳು ತಮ್ಮ ದಿನಚರಿ ಪ್ರಾರಂಬಿಸುತ್ತಿದ್ದವು. ಮನೆಯಲ್ಲಿ ಮಳೆಗಾಲದ ತಯಾರಿ ಶುರುವಾಗಲು,ನಮ್ಮ ಶಾಲಾ ತಯರಿಯು ಶುರುವಾಗುತ್ತಿದ್ದವು.ಮಳೆಗಾಲದ ಚಪ್ಪಲು,ಹೊಸ ಪಾಠಿ ಚೀಲ,ರೈನ್ ಕೋಟ್, ಹೊಸ ಪುಸ್ತಕ,ಪಟ್ಟಿ..ವ್ಹಾ :) I really miss it now. ಪಟ್ಟಿಗಳಿಗೆ bind ಹಾಕುವುದು,label ಅಂಟಿಸುವುದು.. :) ನೀರು ತಗುಲಬಾರದೆಂದು plastic cover protection.ಕೆಲವೊಮ್ಮೆ ಪಾಠಿಚೀಲಕ್ಕು ಸಹ.. ಪಾಠಿ ಒರೆಸಲು ಮಳೆಗಾಲದ ನೀರುಬಳ್ಳಿ ಸಂಗ್ರಹ.ಮಜ ಮೋಜು.
ತಂಗಿ ಒಟ್ಟಿಗೆ ರೈನ್ ಕೋಟ್ ಹಾಕಿ ಕೈ-ಕೈ ಹಿಡಿದು ಶಾಲೆಗೆ ಹೊಗುವ ಸಡಗರ.

ನನ್ನ ಅಜ್ಜನ ಮನೆ,ಪಟ್ಟಣದ ಒಂದು ಚಿಕ್ಕ ಹಳ್ಳಿ. ಅಲ್ಲಿ ಮಳೆಗಾಲದಲ್ಲಿ ಹಳ್ಳ ತೋಡುಗಳು ಕೆಂಪು ನೀರಿಂದ ತುಂಬಿ ಹರಿಯುತ್ತಿದ್ದವು.ಅದನ್ನು ನೋಡಿದರೆ ಭಯ ಆಗುತ್ತಿತ್ತು.ಒಂದು ಹಳ್ಳ cross ಆಗಲು ಸಂಕ.ಮಳೆ ನೀರಲ್ಲಿ ಆಡಬಾರದೆಂಬ ಕಟ್ಟಪ್ಪಣೆ ಅಪ್ಪ ಅಮ್ಮಂದಿರಿಂದ.ಆದರು ಕೆರೆಯಲ್ಲಿ ಕಾಲು ಚಾಚಿ ಆಡುತ್ತಿದ್ದೆವು.

ಶಾಲಾ ದಿನಗಳಲ್ಲಿ ಮಳೆಗಾಲದಲ್ಲಿ ರಜೆಯ ಮೋಜು.ಮಳೆ ತುಂಬಾ ಜೋರು ಬಂದರೆ ಕಪ್ಪು ಹಲಗೆಯಲ್ಲಿ ಬರೆಯುತ್ತಿದ್ದದ್ದು ಕಾಣುತ್ತಿರಲಿಲ್ಲ.ಗುಡುಗು ಮಳೆ ಜೋರಾದರೆ teacher ಧ್ವನಿ ಕೇಳಿಸುತ್ತಿರುಲಿಲ್ಲ.ಪಕ್ಕದ ಊರಿನ ನದಿಗೆ ಪ್ರವಾಹ ಬಂತೆಂದರೆ ನಮಗೆ ರಜಾ.

ಈಗ ಇದನ್ನೆಲ್ಲ ನೆನಪಿಸಿಕೊಂಡು ಅಮ್ಮನ ಕೈಯ ಹಲಸಿನಕಾಯಿಯ ಹಪ್ಪಳ,ಚಿಪ್ಸ್ ತಿನ್ನೋದೆ ಚಂದ.ಹೀಗೆ ಆಲೋಚನೆ ಮಾಡುತ್ತ ಮಳೆಗಾಲದ ಒಂದು ದಿನ ಕಳೆದು ಹೋಯಿತು :)

बार बार आति है मुजको मधुर याद बचपन तेरि
गया ले गया तु जीवन कि सबसे मस्त खुशि मेरि

आ जा बचपन ऎक बार फिर दे दे अपनि निर्मल शांति
व्याकुल व्यथा मिटाने वालि वो अपनि प्राक्रत विष्रांति

*************************************************************************************

Untitled

ಮುಸ್ಸಂಜೆಯ ಸಮಯ
ಸುಂದರ ಕಡಲ ತೀರ
ಸೂರ್ಯ ಪಶ್ಚಿಮ ದಿಕ್ಕಿನಲ್ಲಿ
ನಾನು ಉಸುಕಿನ ದಾರಿಯಲ್ಲಿ

ಹೋದೆನು ತುಂಬಾ ದೂರ
ಸಮುದ್ರದ ಅಲೆಯ ಭೀಕರ ಆಟ
ಕತ್ತಲು ಸರಿಯಿತು
ಮನೆಗೆ ಹೋಗುವ ಕಾತುರ

ತಿರುಗಿ ಹೊರಟಿತು ಪಯಣ
ಮನೆಯ ಕಡೆಗೆ
ಕಾಣದಾದೆನು ಸಂಗಾತಿಯ
ಎಲ್ಲಿ ಮಾಯವಾಯಿತೊ ನೆನಪುಗಳು.....

*************************************************************************************
ಇಲ್ಲಿಯವರೆಗೆ . . .




ಮನೆಯ ಬಾಲ್ಕನಿಯಲ್ಲಿ ಕುರ್ಚಿ ತಂದಿರಿಸಿ,ಸಂಜೆಯ ತಂಗಾಳಿಗೆ ಮೈಯ್ಯೊಡ್ಡಿ ಕುಳಿತೆನು. ಐದನೆ ಮಹಡಿಯಲ್ಲಿ ಕೂತು ಸೂರ್ಯಾಸ್ತದ ಸೊಬಗನ್ನು ಸವಿಯುವುದರ ಮಜಾ ಅನುಭವಿಕೆಯಲ್ಲಿದೆ.ಹಾಗೆಯೆ ಸಮಯ ಕಳೆದಂತೆ ಸೂರ್ಯನು ತನ್ನ ಮನೆಗೆ ತೆರಳಿ ಚಂದ್ರನ ಆಗಮನವು ಅಣಿ ಗೊಳ್ಳುತ್ತಿರುವಾಗ ಮನಸ್ಸು ತನ್ನ ನೆನಪಿನ ಸುರುಳಿಯನ್ನು ಬಿಚ್ಚಿಕೊಳ್ಳಲು ಶುರು ಮಾಡಿತು.ಸುಮಾರು 20 ವರ್ಷದ ಹಿಂದಿನ ಕಾಲಚಕ್ರಕ್ಕೆ ಮನಸ್ಸನ್ನು ಕೊಂಡೊಯ್ಯಿತು.


ಮನೆಗೆ ಹಿರಿಮಗಳಾಗಿ ಹುಟ್ಟಿದ ನಾನು,ಅಪ್ಪ ಅಮ್ಮನ ಅಕ್ಕರೆಯ ಬೈಗುಳದಿಂದಲೇ ಬೆಳೆದೆನು. ಬಾಲವಾಡಿಯಿಂದ ಸ್ವತಂತ್ರತೆಯ ಜೀವನವೂ ಪ್ರಾರಂಭವಾಯಿತು.ಈ ಸಮಯದ ಘಟ್ಟದಲ್ಲಿ ಹಲವು ಘಟನೆಗಳು ಅಚ್ಚೊತ್ತಿದವು್,ಹಲವು ಮಳೆಯ ನೀರಿಗೆ ಭೂಮಿಯ ಮೇಲ್ಪದರ ಕೊಚ್ಚಿ ಹೋಗುವಂತೆ ಸೂಚನೆಯೆ ಇಲ್ಲದೆಯೆ ಮರೆಯಾದವು.


primary school life ಮಸ್ತ್ ಮಜಾ ಇತ್ತು.ಅಕ್ಕೋರು,ಬಾಯೊರು,ಮಾಸ್ತರ್ರು ಅಂತ ಹೇಳಿಕೊಂಡು ಗುರುಗಳ ಹಿಂದೆ ಮುಂದೆ ಸುತ್ತಾಡಿಕೊಂಡಿದ್ದ ಕಾಲ. ಇದ್ದುದರಲ್ಲಿಯೆ ಚಿಂದಿ ಉಡಾಯಿಸುತ್ತಿದ್ದೆವು. ದಿನ ಪಂಚಾಂಗ ಬರೆಯುವುದು,ಗಾದೆ ಮಾತು ವಿಸ್ತರಣೆ,ನಿತ್ಯದ news paper ನ ಮುಖ್ಯಾಂಶ ಓದುವುದು,ರಂಗೋಲಿ ಬಿಡಿಸುವುದು,ಆಣಿಮುತ್ತುಗಳು ಹತ್ತು ಹಲವಾರು ಕೆಲಸಗಳು ದಿನ ನಿತ್ಯ ನಡೆಯುತ್ತಿದ್ದವು."ಜೈ ಭಾರತ ಜನನಿಯ ತನುಜಾತೆ" ಎಂಬ ಕುವೆಂಪು ರಚಿತ ನಾಡಗೀತೆಯೊಂದಿಗೆ ಶಾಲೆ ಶುರುವಾಗಿ "ಜನಗಣ ಮನ ಅಧಿನಾಯಕ ಜಯ ಹೇ" ದಿಂದ ಆ ದಿನದ ರಂಜನೆಯ ಕ್ಷಣಗಳು ಕಳೆಯುತ್ತಿದ್ದವು.ಕಸದ ಪಾಳಿ,ನೀರಿನ ಪಾಳಿ..ಬರೀ ಪಾಳಿಗಳದ್ದೇ ಭರಾಟೆ. :) ರಾಜ ರಾಣಿಯರಾಗಿ ಮೆರೆಯುತ್ತಿದ್ದಂತ ಸುಮಧುರ ಹೊತ್ತುಗಳು.ಕೋಲಾಟ,ಗುಂಪು ನ್ರತ್ಯ,ದೀಪ ನ್ರತ್ಯ,ನಾಟಕ ವಿವಿಧ ಪಠ್ಯೇತರ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ,ಪ್ರತಿಭಾ ಕಾರಂಜಿಯಂತಹ programs,ಸಮುದಾಯದತ್ತ ಶಾಲೆ ಇನ್ನೂ ಕಣ್ಣೆದುರಿಗೆ ಪರದೆ ಕಟ್ಟಿದಂತಿದೆ.ಅದರೊಟ್ಟಿಗೆ ಗುರುಮಾತೆಯರ ಸಹಕಾರ,ಹುರಿದುಂಬುವಿಕೆ ಇನ್ನಷ್ಟು ಪ್ರೊತ್ಸಾಹಪೂರಕವಾಗಿದ್ದವು.


high school life ಬಂದೇ ಬಿಟ್ಟಿತು.maturity level will be a bit high (no comparision with present :P) .ನಿರಂತರ ಚಟುವಟಿಕೆಯ ಜೀವನ. ಪ್ರಾಥಮಿಕ ಶಾಲೆಯ ನೆನಪುಗಳನ್ನು ಹೊತ್ತುಕೊಂಡು ಹೊಸ ರೀತಿಯ ಬದುಕು ಇರಬಹುದೆಂಬ ಸಂಶಯದಲ್ಲಿ ಶುರುವಾಯಿತು ಮೆಟ್ರಿಕ್ ಶಾಲಾ ಜೀವನ.ಹಾಡು,ಭಾಷಣ,ಪ್ರಬಂಧ,ನ್ರತ್ಯಗಳಂತಹ competitions ಗಳಲ್ಲಿ ಭಾಗವಹಿಸಿ ಪ್ರಶಸ್ತಿ ದೋಚುವಿಕೆ,ತಂದೆ ತಾಯಂದಿರ ಪ್ರೋತ್ಸಾಹ...ಇದನ್ನೆಲ್ಲ ನೆನೆಸಿಕೊಂಡರೆ ಇನ್ನೊಮ್ಮೆ ಆ ೩ ವರ್ಷಗಳು ಪುನಃ ಮರುಕಳಿಸುವುದೇ ಎಂಬ ಬಯಕೆ ಮನದ ಮೂಲೆಯಲ್ಲಿ ಚಿಗುರೊಡೆಯುತ್ತೆ.ಗೆಳೆತಿಯರ ಗುಂಪುಗಾರಿಕೆ,ಹರಟೆ ಕಣ್ಣನ್ನು ತೇವ ಮಾಡಿ ಸಂತ್ರಪ್ತ ಭಾವ ಮೂಡಿಸುತ್ತದೆ .ಗೆಳತಿಯರ ಸಂಘದಲ್ಲಿ ಮಾಡಿದ ಮೋಜು,ಮಜಾ,ಗಮ್ಮತ್ತು ಮುಖದಲ್ಲೊಮ್ಮೆ ಮಂದಹಾಸ ಸುಳಿದಾಡುವಂತೆ ಮಾಡುತ್ತದೆ :) :)


ಇನ್ನು ಬಂದಿದ್ದೆ college life so called golden life.ಗೊತ್ತಿಲ್ಲದೆ ಪಠ್ಯೇತರ ಚಟುವಟಿಕೆಗಳಿಗೆ ತಡೆಗೋಡೆ.ಓದುವದಕ್ಕೆ ಬಹು ಪ್ರಾಮುಖ್ಯತೆ ಕೊಟ್ಟಂತ ಭಾವನೆ (ಈಗ ನನ್ನ ಅನಿಸಿಕೆ).ಹಾಗು ಹೀಗು ಪದವಿ ಶಿಕ್ಷಣ ಮುಗಿಯಿತು ಇಂಜಿನಿಯರ್ ಆಗಬೇಕೆಂಬ ಛಲದಲ್ಲಿ.ಚಿಕ್ಕಂದಿನಿಂದ ಟೀಚರ್ ಆಗಬೇಕೆಂದು autograph ಲ್ಲಿ ಬರೆದ ನೆನಪು.


ಇಂಜಿನಿಯರಿಂಗ್ life!!! ಮಸ್ತಿ ತಂದದ್ದು.ತುಂಬಾ ಕಠಿಣ ಎಂಬುದು ಎಲ್ಲರ ಅಂಬೋಣ.ಆದರೂ 'ನನ್ನಿಂದ ಯಾಕೆ ಅಸಾಧ್ಯ' ಎಂಬ ಭಾವ.ಮನಸ್ಸು ಚಂಚಲತೆಗೆ ದಾರಿ ಮಾಡಿಕೊಡುವ ವಯಸ್ಸು."ಬಾ ನೋಡು ಗೆಳತಿ ನವಿಲು ಗರಿಯು ಮರಿ ಹಾಕಿದೆ " ಎಂದು ಹಾಡುವ ಗೆಳೆಯನ ಹುಡುಕಾಟ,ಅದರ ಜೊತೆ ಅಪ್ಪ ಅಮ್ಮನ ಭಯ :) :P :) :) :) (ಸಿಕ್ಕದಿದ್ದದ್ದು ಬೇರೆ ವಿಷಯ).. group activities,trip,seminar,project ಪಟ್ಟಿಯುದ್ದದ list ಯೊಂದಿಗೆ ಅಂತೂ ಇಂತೂ engineering distinction ದೊಂದಿಗೆ ಮುಗಿಯಿತು.ಸುರಳಿತವಾಗಿ ಮುಗಿದಿದ್ದಲ್ಲದೆ MNC ಯಲ್ಲಿ ಕೆಲಸವೂ ದೊರಕಿದ ಸಂದರ್ಭ.ಎಲ್ಲರಲ್ಲೂ ಹರ್ಷದ ಧನ್ಯವಾದಗಳು.ಮನಸಲ್ಲಿ ಎನೋ ಸಮಾಧಾನ. Wonderful life was being so.


ಸ್ವತಂತ್ರತೆಯ ಜೀವನಕ್ಕೆ ಕಾಲಿಟ್ಟಿದ್ದೆನೆ ಅಷ್ಟೆ. ಅದರಲ್ಲಿಯ ಕಷ್ಟ-ನಷ್ಟ,ನೋವು-ನಲಿವುಗಳ ಪರಿಚಯ ಇನ್ನೂ ಕಾದಿದೆ.

ಸಂಬಂಧಗಳು ಕೊಂಡಿಗೆ ಕೊಂಡಿ ಸೇರಿಕೊಂಡಂತೆ ಬಾಲದಂತೆ ಇಲ್ಲಿಯ ತನಕವೂ ಬೆಳೆಯುತ್ತ ಬಂದಿದೆ.ಜೀವನದ ಸುಖ-ದುಃಖ ಸಮ್ಮಿಳಿತವಾಗಿ ಸಾಗಿ ಬಂದಿದೆ.ಕೊಂಡಿಯ ನಡುವೆ ಇರುವ ಅನ್ಯೋನ್ಯತೆಯ ಭಾವ ಭಾವುಕಳಾಗುವಂತೆ ಮಾಡುತ್ತದೆ.


ಜೀವನದ ಮೊದಲ ಘಟ್ಟದಲ್ಲಿ ತಿದ್ದಿ ತೀಡಿ ನಮ್ಮನ್ನು ಮನುಷ್ಯರಾಗುವಂತೆ ಮಾಡಿದ ಇಲ್ಲಿಯವರೆಗಿನ ಗುರುಗಳಿಗೆ,ಹಿರಿಯರಿಗೆ ನನ್ನ ಭಾವಪೂರ್ವಕ ಪ್ರಣಾಮಗಳು.

ಚಿರಕಾಲ ಇರಲಿ ಈ ಸ್ನೇಹ,
ಚಿರಕಾಲ ಇರಲಿ ಈ ಪ್ರೇಮ,
ಚಿರಕಾಲ ಇರಲಿ ಈ ಹಾಡು,
ಚಿರಕಾಲ ಇರಲಿ ಈ ನೆನಪು,
ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ,
ನಾನು ಸ್ನೇಹ ಜೀವಿ ನೀನು ಸ್ನೇಹ ಜೀವಿ, ಲೋಕದಲ್ಲಿ ಸ್ನೇಹ ಚಿರಂಜೀವಿ.ಹಾಡು ಗುನುಗುಣಿಸಿದೆ. :)


*************************************************************************************
ಮದುವೆಯ ಹೊಸ್ತಿಲಲಿ



ಯೌವನದ ಗಾಂಭೀರ್ಯ
ತುಸು ನಗುವು ವದನದಲಿ
ಎದುರಿಕೆಯ ತವಕವದು
ಕಣ್ಣಂಚಲಿ

ನೂರಾರು ಭಾವಾಂತರಂಗಗಳು
ಎದೆಯಲ್ಲಿ ಪಸರಿಸಿ
ದುಃಖ ಸುಖಗಳು ಸಮ್ಮಿಳಿಸಿ
ಭಯವದುವು ಮನದಲಿ
ತೋರ್ಪಡಿಸಿ


ಇರು ನೀನು ಬೇರೆಯವರೊಡನೆ
ಸಾಕೆಮಗೆ ನಿನ್ನೊಲುಮೆ
ಉಣಬಡಿಸು ಎಲ್ಲರಿಗು ನಿನ್ನಕ್ಕರೆಯ
ಅಡುಗೆಯನು
ಇದ ನೆನೆದು ಕಣ್ಣುಗಳು
ಕಣ್ಣೀರ ಮೊರೆ ಹೊಕ್ಕು
ತಮ್ಮ ನೋವನು
ಬಿತ್ತರಿಸಲೆತ್ನಿಸಿವೆ


ಹೆಣ್ಣು- ನೀನು ಪರರ ಸೊತ್ತೆನುವ
ಮಾತಿಗೆ ಬೆಲೆ ಕೊಟ್ಟು
ಬೇರ್ಪಡಿಸುತಿಹರು ನಿನ್ನ
ಹೆತ್ತವರಿಂದ


ಬಂಧನವು ಹಲವಾರು
ಭಿನ್ನತೆಯು ಅದರೊಳಗೂ
ಕೂಡಿ ಬಾಳಿದರೆ ಅದು
ಅಮೃತದ ಪಾನಕವು
ಚಿರಕಾಲ ಸಿಗಲೆಂದು
ಹಾರೈಕೆಯು

*************************************************************************************
ಕರುಣಾಭೂತಿಯ ಮುಖಗಳು

ಭಾಗ ೧

ಕಾಲಲ್ಲಿ ತಳ ಸವೆದ ಚಪ್ಪಲ್ಲು
ಹಳೆಯ- ಮಾಸಲು ಹೋಗುತ್ತಿದ್ದೆವೆಂದು
ಸಾರಿ ಹೇಳುತ್ತಿರುವ ಒಪ್ಪಣದ ಬಟ್ಟೆ
ಕಣ್ಣಲ್ಲಿ ನೂರು ಕನಸುಗಳು
ಮನದಲ್ಲಿ ಸಾವಿರ ಆಲೋಚನೆಗಳು

ಸೀಟಲ್ಲಿ ಕುಳಿತನೆಂದರೆ
ರೋಡಲ್ಲಿ ತನ್ನದೆ ಕಾರುಬಾರು
ಪೀ ಪೀ ಎಂದು ಅವಾಜು ಮಾಡುತ್ತ
ತನಗೆ ಮಾತ್ರ ದಾರಿ ಬಿಡೆಂದು
ರಭಸದಿ ಬಸ್ ಓಡಿಸೋ
ಬಸ್ ಡ್ರೈವರಗಳು

ನಿಗದಿತ ಸಮಯಕ್ಕೆ ನಮ್ಮನ್ನು
ತಲುಪಿಸಿ
ರಾತ್ರಿ ಜಾಗರಣೆಗೆ ಅಣಿವಾಗಿ
ಸುರಕ್ಶಿತವಾಗಿ ಸ್ಥಳಕ್ಕೆ ತಲುಪಿಸುವ
ಕರುಣಾಭಾವಿಗಳು



ಭಾಗ ೨



ಎಣ್ಣೆ ಕಾಣದ ಕೂದಲು
ಸ್ನಾನ ಮಾಡದ ಮೈ
ಮಣ್ಣು ಮಣ್ಣು ಬಟ್ಟೆ
ಅಲ್ಲಲ್ಲಿ ಹರಿದ ಚೂರುಗಳು

ಗುಡಿಸಿಲಿನಲ್ಲಿಯೆ ಜೀವನ
ಬೇರೆ ಅರಮನೆಯೆ ಬೇಕಿಲ್ಲವೆಂದು
ಅಲೆಮಾರಿಗಳಿವರು

ಮಗು ತನಗೆ "ಆ ಆಟಿಕೆ" ಬೇಕೆಂದು
ಅಮ್ಮನ ಸೆರಗು ಹಿಡಿದು
ಬೇಡುತಿರೆ
ಮುಖದಲ್ಲಿ ಕೋಪವಿರಿಸಿ
ಮಗುವನ್ನು
ದೂರತಳ್ಳಿ ಬಾಯಿ ಮುಚ್ಚೆಂದು
ಗದರುತಿಹಳು
ಮಗುವಿನ ಹಟ ಮುಗಿಯಲಿಲ್ಲವೆಂದು
ದರ ದರನೆ ರಟ್ಟೆ ಹಿಡಿದು
ಎಳೆಯುತಿರೆ
ಎಂತ ಕ್ರೂರಿ ಹೃದಯವು
"ಅಯ್ಯೋ" ಅನಲೇಬೇಕು

ಶಾಲೆ ಕಾಣದ ಹಸು ಕಂದಮ್ಮಗಳು
ಗುಡಿಸಿಲಿನಲ್ಲಿ ಮಲಗಿ
ಕನಸು ಕಾಣುವ ಕೂಸುಗಳು
ಬಡತನದ ಬೇಗೆಯಲಿ ಬೆಂದು
ಅಮ್ಮನ ಕರುಣೆ-ರಹಿತ
ಧೋರಣೆಗೆ ಬಲಿಯಾಗಿ
ಜೀವನವಿಡಿ ಅಲೆಯುತ್ತ
ಕಳೆಯುವುದೇ??!!!



ಭಾಗ ೩



"ಅಮ್ಮ" "ಅಕ್ಕ" "ತಂಗಿ" "ಅಯ್ಯ"
ಎಂದೆಲ್ಲ ಸಂಬೋಧಿಸಿ
ಕೈಯಲ್ಲಿ ವಿಚಿತ್ರ ಆಕಾರದ
ಬಟ್ಟಲು ಹಿಡಿದು
ಭಿಕ್ಷೆಯ ಅಂಗಲಾಚುತಿರೆ
ಮನವದುವು ಒಮ್ಮೆ ಮೌನವಾಗಿ
ಸ್ಪಂದಿಸಿ ಬೇರೆ ಏನನ್ನೋ
ಯೋಚಿಸಲು

ಎಲ್ಲೆಂದರಲ್ಲಿ ಕಾಣಸಿಗುವ
ಈ ಅಪರೂಪವಲ್ಲದ
ಮುಖಗಳಿಗೆ
ಕರುಣೆಯ ತೋರಲು ಬೇಕೇ?!!

ಕಾಲಲ್ಲಿ ತ್ರಶೆಯಿದ್ದು
ಕೈಯಲ್ಲಿ ಬಲವಿದ್ದು
ದುಡಿದು ತಿನ್ನಲು
ಏಕೆ ಅಸಾಧ್ಯ?

ಬಾಡಿ ಹೋದ ಹಳೆ ಚೈತನ್ಯಗಳಿಗೆ
ಈ ಮಾತು ಅನ್ವಯಿತವಾಗದೆ
ಇಂತ ಜೀವಗಳಿಗೆ ಕರುಣೆಯ ತೋರಲು
ಯಾರಿಲ್ಲವೆ

*************************************************************************************

೧. ???


ಗಾಳಿ ಬೀಸಿತು ತಣ್ಣನೆ
ಹಾರಿ ಹೋಗಲೆ ಮೆಲ್ಲನೆ
ಮನದಲ್ಲೇಕೋ ತಳಮಳ
ಯಾಕಂತೆ??
ಗೊತ್ತಾಗಲಿಲ್ಲ...!!!!
ನೀನಾದರು ಹೇಳು ಪರಿಮಳ.....

೨. ಗೆಳೆಯನ ನೆನಪು


ಇಂದೇಕೋ ಕಾಡುತ್ತಿದೆ
ಈ ನನ್ನ ಮನಸ್ಸು
ಬರಲಿಲ್ಲವಲ್ಲ,ಅಂದು
ಕಂಡಿದ್ದ ಕನಸು.....

೩. ನಾ ಕಂಡ ಜೀವನ

ಕಾಗದದ ಹಾಳೆಯಂತೆ
ಈ ನನ್ನ ಜೀವನ
ಗಾಳಿ ಬಂದಾಗ ಮಾತ್ರ
ಪಟ ಪಟ ಸಿಂಚನ
ಇರುವುದು ಸುಮ್ಮನೆ
ದಿನವೂ ಹೀಗೆ
ಆದರೂ ಕಾಡುವುದು
ಹಾಳೆ ಹರಿದರೆ ಮುಂದೇನು?:-(

ಗೀಚಿ ಹೋದವು ಏನೇನೋ ಇದರಲ್ಲಿ
ಕಾಣದಾದವು ಹಿಂದಿನದು ಇದರಲಿ
ಭವಿಷ್ಯಕ್ಕಂತೂ ಕೊನೆಯಿಲ್ಲ ಮೊದಲಿಲ್ಲ
ವರ್ತಮಾನಕ್ಕೊಂದೇ ಈ ಹಾಳೆ ಮೀಸಲು.........


೪. ವಿಸ್ಮಯ

ಬಾಳ ದಾರಿಯಲ್ಲಿ ನಡೆದೆ ಹುಚ್ಚಿಯಂತೆ
ಬಣ್ಣ ಬಣ್ಣದ ಕನಸು ಕಟ್ಟಿ
ಕನಸು ನನಸಾಗಲಿಲ್ಲ ಇಲ್ಲಿವರೆಗೂ:-)
ಪಡೆದೆ ನೂರೆಂಟು ನೆನಪುಗಳ

ಬೇಕು ಬಾಳಿಗೀಗ ಆಧಾರ
ಕೋಲಾಗಿ ನಿಲ್ಲುವನೆ ಈತನು!!!!!??

*************************************************************************************
ಒಂದು ಮಳೆಗಾಲದ ಮುಸ್ಸಂಜೆಯ ಘಳಿಗೆ...........


ಮನಸ್ಸು ತುಂಬಾ ಭಾರವಾಗಿತ್ತು. ಮನೆಯ ಹೊರಾಂಗಣದಲ್ಲಿ ಕುರ್ಚಿ ಹಾಕಿ ಕೂತಿದ್ದೆ. ಮನಸ್ಸು ಹಗುರವಾಗಲು ಕಾತುರ. ಆ ಹಸಿರಿನ ಮಡಿಲಲ್ಲಿ ಕುಳಿತಾಗ ಮನಸ್ಸು,ಹೃದಯ ಕಾಲಿಗೆ ಕಟ್ಟ ಚಕ್ರದಂತೆ ಹಿಂದೆ ಮುಂದೆ ಹರಿದಾಡಿತು. ಹಾಗೆಯೇ ಅದನ್ನೇಕೆ ಪುಟದಲ್ಲಿ ಅಚ್ಚಿಡಬಾರದೆಂಬ ಬಯಕೆ. ಅದಕ್ಕೆ ಈ ಪ್ರಯತ್ನ.:-)

ಸರಿ..

ಮನಸ್ಸು ನೀರಸವಾಗಿ ಆಕಾಶದತ್ತ ಶೂನ್ಯ ದೃಷ್ಟಿ ನೆಟ್ಟಿತ್ತು. ಕಪ್ಪು ಮೋಡಗಳು ನಿಧಾನವಾಗಿ ವಿದಾಯದ ಸಂಕೇತವಾಗಿ ಹೋಗುತ್ತಿರುವಂತೆ ಭಾಸವಾಯಿತು. ಮೋಡದಲ್ಲಿ ಹುದುಗಿದ ನೀರಿನ ಹನಿಗಳು ಭೂಮಿಗೆ ಬರುವ ಆತುರತೆ ಕಾಣತೊಡಗಿತು. ಭೂಮಿಯು ನವೋಲ್ಲಾಸದ ಸಂಭ್ರಮಕ್ಕೆ ಕಾಯುತ್ತಿರುವಂತೆ ಮನದಲ್ಲೂ ಸಹ ಖುಷಿಯ ರೇಖೆಗಳು ಮೂಡತೊಡಗಿದವು.

ಪ್ರಕೃತಿ ನೋಡಿ ಯಾರೋ ಒಬ್ಬ ಕವಿತೆ ಬರೆದನಂತೆ.ಈ ಪ್ರ ಕೃತಿ ನನ್ನ ಮನದಲ್ಲು ಏನೇನೋ ಮೋಡಿ ಮಾಡಿ ಮನಸಿನ ಏಕಾಂತಕ್ಕೆ ಸಾಥ್ ನೀಡಿತು.

ಮುಗ್ದ್ಜ ಮನಸ್ಸು ಫ್ರೌಢತೆಯ ಮೆಟ್ಟಿಲು ಏರುವ ತವಕ.ಆ ಕಿಲಕಿಲ ನಗು ಮುಗುಳ್ನಗೆಯಾಗಿ ಪರಿವರ್ತನೆ ಆಗುತ್ತ ಇದೆ...
ಎಷ್ಟೊಂದು ವ್ಯತ್ಯಾಸ....:-)

ಮನಸ್ಸಿನ ಏಕಾಂತಕ್ಕೆ ಮುಕ್ತಿ ಸಿಕ್ಕಿ ,ಅಪ್ಪ ಅಮ್ಮ ತಂಗಿಯರೊಡನೆ ಸಮಯ ಕಳೆಯಲು ಹಜಾರಕ್ಕೆ ಬಂದೆ.......