ಗುರುವಾರ, ಮಾರ್ಚ್ 29, 2012

ಸಮಾಧಾನ- ಕಣ್ಣೀರು


ದುಗುಡ ತುಂಬಿದ ಮನವು
ಬೇಸರದಿಂದ ಜಜ್ಜರಿಸಿದ ಲಯವು
ಒಂದೇ ಪ್ರೀತಿಯ ಮಾತು ಸಾಕಾಯಿತು
ತಲೆ ನೇವರಿಸಿದಂತಹ ಭಾಸವಾಯಿತು
ಥಟ್ಟನೆ ಇಳಿದು ಬಿತ್ತೊಂದು ಕಣ್ಣ ಹನಿ
ಸಮಾಧಾನವಾಯಿತು ಮನದ ಗಣಿ
ನಿಟ್ಟುಸಿರು ಬಿಟ್ಟಂತ ಧ್ವನಿ

ಬುಧವಾರ, ಮಾರ್ಚ್ 28, 2012

ಏಕೆ ತೋರುವೆ ತಾರತಮ್ಯ ?




ಹೆಣ್ಣು ನೀನು ಜಗದ ಮಾಯಾ ಸುಂದರಿ
ತೋರುತಿಹೆ ಎಲ್ಲೆಲ್ಲೂ ನಿನ್ನ ಪರಿ
ಆದಿ ಮಾತೆಯಾಗಿ ಪೂಜಿಸಲು ನಿನ್ನ
ಭುವನ ವಸುಂಧರೆಯಾಗಿ ತನ್ನ

ಮನೆಯ ದೀಪಕೆ ನೀನೆ ಎಣ್ಣೆ
ನಿನಗೆ ಸರಿ ಸಾಟಿಯಿಲ್ಲ ಹೆಣ್ಣೇ
ಮನ ಮನೆಯ ತುಂಬಿದೆ
ನಲಿವು ನಗುವ ಪಸರಿಸಿದೆ

ಅಕ್ಕರೆಯ ಅಕ್ಕನಾಗಿ
ಮುದ್ದಿನ ತಂಗಿಯಾಗಿ
ತಮ್ಮನಿಗೆ ಬಲವಾಗಿ
ಅಪ್ಪನ ಮನಸಿಗೆ ಮುದ ನೀಡಿ
ಅಮ್ಮನ ಪಾದದಡಿಗೆ ಶಿರ ಬಾಗಿ
ಅಮ್ಮನ ಕೆಲಸದಲ್ಲಿ ನೆರವಾಗಿ
ಗಂಡನ ತೋಳುಗಳಿಗೆ ಬಲವಾಗಿ
ಹುಟ್ಟಿದ ಮನೆಗೂ ಹೋದ ಮನೆಗೂ
ಕೀರ್ತಿ ಪತಾಕೆಯಾಗಿ
ನಿನ್ನ ನೀನು ಗಂಧದ ಕೊರಡಂತೆ
ಜೀವ ತ್ಯಾಗವ ಮಾಡಿ
ನಿಸ್ವಾರ್ಥ ಸೇವೆಗೆ ಮುಡಿಪಾಗಿ

ಇಳೆಯಾಗಿ ವಸುಂಧರೆಯಾಗಿ
ನಮ್ಮ ಸಲಹುತ್ತಿರುವ ತಾಯಿಯೇ
ತಳೆದಿಹರು ನಿನಗಾಗಿ
ನಿನ್ನ ವಿರುದ್ಧವೇ ಧೋರಣೆಯ

ಹೆಣ್ಣು ನೀನು ಗಂಡು ನಾನು
ಎಂದೇಕೆ ಮೂದಲಿಸುವಿರಿ
ಎಲ್ಲ ರೂಪವ ತಾಳಿ ಸಲಹುವಳು ನಿಮ್ಮನ್ನು
ಹೆಣ್ಣಲ್ಲವೇ ಸರಿ

ಹೆಣ್ಣು ಗಂಡು ಸೇರಿ ಬಾಳ್ವೆ
ಸುಂದರ ಅಕ್ಷರಗಳಿರುವ ಹಾಳೆ
ಸಾಕು ನಿಲ್ಲಿಸಿರಿ ಆ ತಾರತಮ್ಯವ
ಮನ ತುಂಬಿ ಪೂಜಿಸಿರಿ
ತಾಳ್ಮೆ ಪ್ರೀತಿಯ ಅದಮ್ಯ ರೂಪವ

ಮಂಗಳವಾರ, ಮಾರ್ಚ್ 27, 2012

ಮೂಕ ಮನಸು


ತಲೆಯದುವು ಕಿಟಿಕಿಗಾನಿಸಿ
ಕಣ್ಣುಗಳೆರಡ ಹೊರ ಹೊರಳುಸುತ್ತಿರೆ
ಮನವದುವು ಮೂಕವಾಗಿದೆ
ಬಯಸಿದೆಲ್ಲವ ಸಿಗದುದೆ

ಬೆಳಕಿನ ಸ್ಪೂರ್ತಿಯಲಿ
ಬಣ್ಣ ಬಣ್ಣದ ವಸ್ತ್ರವು ಮಿನುಗುತಿರಲು
ಅದ ನೋಡಿ ಮನವದುವು
ಧರಿಸಲು ಆಸೆ ಪಡುತಿದೆ

ಬಯಲದುವು ಮಕ್ಕಳೆಲ್ಲರೂ
ಒಂದುಗೂಡಿ ಆಡುತಿರಲು
ಅಸೆಯದುವು ಮೂಡುತಿದೆ
ತನ್ನನ್ನು ಅಲ್ಲಿ ಭಾವಿಸುತಿದೆ

ತಣ್ಣನೆಯ ಗಾಳಿಯ ಸ್ಪರ್ಶಕೆ
ಮನವು ಮುದಗೊಳ್ಳಲು
ಆಸೆಯೆಲ್ಲವ ಕಟ್ಟಿ ಮನದಿ
ತಲೆಯಾನಿಸಿದೆ ವಿಶ್ರಮಿಸಲು ಸೀಟಿಗೆ

ಶುಕ್ರವಾರ, ಮಾರ್ಚ್ 16, 2012

ಒಂದು ಸುಂದರ ನಗುವಿಗೆ...ಇಷ್ಟು ಸಾಕಲ್ಲವೇ.. ???


ಮನವೇಕೊ ಹಿಂದಿನ ನೆನಪುಗಳ
ಮೆಲುಕುಹಾಕುತ್ತಿರಲು
ಪ್ರೀತಿಯ ಮಾತುಗಳು ಸೃಷ್ಟಿಸಿದ
ಶಾಂತತೆ ನಗುವ ತರಲು.. ಭಾವಗಳ ಬಾಚಿ ತಬ್ಬಲು
ಇಷ್ಟು ಸಾಕಲ್ಲವೇ??

ಮನವೇಕೊ ಸೋತು ಹೈರಾಣವಾಗಿ
ಕಣ್ಣೀರ ಹೊರಹಾಕುತ್ತಿರಲು
ಮೆಲ್ಲನೆ ಕೈ ಹಿಡಿದು ಸಾಂತ್ವನ ಹೇಳಿದ
ನುಡಿಗಳು ಸಮಾಧಾನ ತರಲು .... ಛಲದ ಪಣ ತೊಡಲು
ಇಷ್ಟು ಸಾಕಲ್ಲವೇ ??

ಮನವೇಕೊ ಬಗೆ ಬಗೆಯಾಗಿ
ಪರಿಹಾರದ ದಾರಿಯ ಹುಡುಕುತ್ತಿರಲು
ಸುಲಭದ ದಾರಿಯು ಮನದಲಿ ಮೂಡಲು
ಸಣ್ಣನೆಯ ನಗುವು ವದನದಲಿ ತೋರಲು.... ಸಾಧನೆಯ ಕಹಳೆ ಮೊಳಗಲು
ಇಷ್ಟು ಸಾಕಲ್ಲವೇ ??

ಮನವೇಕೊ ಪದಗಳ ಜೋಡಿಸಿ
ಕವನವ ಹೊಸೆಯುತ್ತಿರಲು
ಸುಂದರ ಭಾವವು ಮನದಲ್ಲಿ ಪುಟಿದೇಳಲು
ಸಂತೃಪ್ತಿ ಭಾವ ಮೂಡಲು... ಸುಂದರ ಕವನ ರಚನೆಯಾಗಲು
ಇಷ್ಟು ಸಾಕಲ್ಲವೇ ??

ಮುದ್ದು ಕಂದಮ್ಮನ ಎತ್ತಿ
ಮುದ್ದಾಡುತ್ತಿರಲು
ಕೆಳಗೆ ಇಳಿಯ ಬಿಡಲು ಅದು ನಿಮ್ಮ
ಕೊರಳಲಿ ಬರ ಸೆಳೆಯಲು... ಪ್ರೀತಿಯ ಸೆಲೆ ಪಸರಲು
ಇಷ್ಟು ಸಾಕಲ್ಲವೇ ??

ಬಚ್ಚಿಟ್ಟ ಬೇಸರದ ಭಾವನೆಗಳು
ತನ್ನಿಂತಾನೆ ತೆರೆದು ಕೊಳ್ಳುತ್ತಿರಲು
ನವಿರಾದ ಭಾವನೆಗಳ ನರ್ತನದೊಂದಿಗೆ
ಒಂದು ಸಣ್ಣ ಹನಿಯು ಕಣ್ಣ ತೇವ ಮಾಡಲು.. ಪ್ರಪುಲ್ಲ ಮನವು ನಿಟ್ಟುಸಿರು ಬಿಡಲು

ಪ್ರೀತಿಯ ಬಯಸಿದ ಮನಕ್ಕೆ
ಇಷ್ಟು ಸಾಕಲ್ಲವೇ ??

ಸೋಮವಾರ, ಮಾರ್ಚ್ 12, 2012

ನೆಲ್ಲಿತೀರ್ಥ...ಎಂಬ ದೇವಸ್ಥಾನ


ಭಯಂಕರ ನಿದ್ದೆಯಲಿ ಕನಸು ಕಾಣುತ್ತಿದ್ದೆ .. ಒಮ್ಮಿಂದೊಮ್ಮೆಲೆ ಅಮ್ಮನ ಕರೆ.."ಏಳು ..ಈಗಲೇ ತಡವಾಗಿದೆ..".. ಅಪ್ಪನ ಬಹು ದಿನದ ಯೋಜನೆಗೆ ಇಂದು(ಆದಿತ್ಯವಾರ) ತೆರೆ ಬೀಳುವ ಕ್ಷಣ.. "ನೆಲ್ಲಿ ತೀರ್ಥ " ಎಂಬ ನೈಸರ್ಗಿಕವಾಗಿ ಬೆಳೆದ ಒಬ್ಬರ ಪರಿಶ್ರಮದ ತಾಣ(ದೇವಸ್ಥಾನ ).. ಪ್ರಯಾಣ ಶುರು ಮಾಡಲು ಸಜ್ಜಾದೆವು..ಅಪ್ಪ ಅಮ್ಮ , ಪಕ್ಕದ ಮನೆ ಆಂಟಿ ಮತ್ತೆ ನಮ್ಮ ಪರಿಚಯದ ಅತ್ತೆ ಮಾಮ ಮತ್ತು ಅವರ ಮಗನೊಂದಿಗೆ ನಮ್ಮ ಕಾರಿನಲ್ಲಿ ತಾಣದೆಡೆಗೆ ಚಲನ..

ಬೆಳಿಗ್ಗೆ ೧೧ ಘಂಟೆ. ಸುಂದರ ಪ್ರಶಾಂತವಾದ ನೆಲ್ಲಿತೀರ್ಥ ಪ್ರದೇಶಕ್ಕೆ ತಲುಪಿದೆವು.. ಸುಮಾರು ೬-೭ ಕಿಲೋ ಮೀಟರುಗಳಷ್ಟು ಹೆದ್ದಾರಿಯಿಂದ ದೂರದಲ್ಲಿರುವ ಸ್ಥಳ.. ಸ್ವಂತ ವಾಹನದ ಅವಶ್ಯಕತೆ... "ಸೋಮನಾಥೇಶ್ವರ ಗುಹಾಲಯ" ಕ್ಕೆ ಸ್ವಾಗತ ಎಂಬ ಬೋರ್ಡ್ ನಮ್ಮನ್ನು ಆಗಮನಕ್ಕೆ ಸಂತಸ ಸೂಚಿಸಿದವು.. ಭಟ್ಟರ ಆಣತಿಯಂತೆ ಸಮೀಪದಲ್ಲಿರುವ ಕೆರೆಯಲ್ಲಿ ಮೈ ಬಟ್ಟೆ ಒದ್ದೆ ಮಾಡಿ ಬಂದು ದೇವರ ಸನ್ನಿಧಾನದಲ್ಲಿ ಕೈ ಮುಗಿದು "ಗುಹಾ ಪ್ರವೇಶ" ಕ್ಕೆ ಸನ್ನದ್ಧರಾದೆವು.
ಮನದಲ್ಲಿ ಏನೋ ಭಯ, ಕಳವಳ ಮನೆ ಮಾಡಿಯಾಗಿತ್ತು..ಜೀವನದಲ್ಲಿ ಮೊದಲ ಬಾರಿಗೆ ಆಮ್ಲ ಜನಕದ ಕೊರತೆ ಇರುವ ಪ್ರದೇಶಕ್ಕೆ ಹೋಗಲು ಮನ ಸಿದ್ಧ ಮಾಡಿಯಾಗಿತ್ತು.. ಒದ್ದೆ ಬಟ್ಟೆಯಲ್ಲೇ ಕೈ ಮುಗಿದುಕೊಂಡು "ಗೋವಿಂದಾ ರಮಣ ಗೋವಿಂದ ಗೋವಿಂದ " ಎನ್ನುತ್ತಾ ಸಾಲಾಗಿ ಸರತಿಯಂತೆ ಗುಹೆಯೊಳಗೆ ಪಾದಾರ್ಪಣೆ.. ತಣ್ಣನೆಯ ಅನುಭವ.. ಎಣ್ಣೆ ದೀಪ ಹೀದ ಒಬ್ಬ ಬಾಲಕ ನಮ್ಮ ದಾರಿ ಪಾಲಕ ಅಲ್ಲದೆ ದಾರಿ ತೋರುಕ.. ಮನದಲ್ಲಿ ಭಯ ಇನ್ನೂ ಜಾಸ್ತಿ ಆಗತೊಡಗಿತು.. ನಮ್ಮ ೭ ಜನರೊಟ್ಟಿಗೆ ಇಬ್ಬರು, ಗಂಡ ಹೆಂಡಿರು, ಮತ್ತೆ ೫೦ ರ ಆಸು ಪಾಸಿನ ಅಜ್ಜಿ ಜೊತೆಯಾದರು.. ಮನದಲ್ಲಿ ಭಕ್ತಿ ತುಂಬಿ ಬಾಯಲ್ಲಿ ಶಿವ ನಾಮ ಸ್ಮರಣೆ ಮಾಡುತ್ತಾ ಸಾಗಿದೆವು.. ಎದ್ದು ನಿಲ್ಲಲಾರದಂತ ಸಣ್ಣ ಗುಹೆ.. ಅಲ್ಲಲ್ಲಿ ಚಿಕ್ಕ ಎಣ್ಣೆ ದೀವಿಗೆಗಳು ನಮಗೆ ದಾರಿ ತೋರುತ್ತಿದ್ದವು.. ತೆವಳಿಕೊಂಡೇ ಮುಂದುವರಿಯಬೇಕಾದಂತ ಪರಿಸ್ಥಿತಿ.. ಎದ್ದು ನಿಂತರೆ ಮೊನಚಾದ ಕಲ್ಲುಗಳ ತಿವಿತ.. ಹರಿಯುತ್ತಿದ್ದ ನೀರಿನಲ್ಲಿ ತೆವಳಿ ಮುಂದೆ ಸಾಗುತ್ತಿದ್ದೆವು.. ಮನದಲ್ಲಿಯ ಭಾವ " ಅರ್ಧ ದಾರಿಯಲ್ಲೇ ಉಸಿರಾಡಲು ತೊಂದರೆಯಾಗಿ ಹಿಂದಿರುಗಳೂ ಆಗದೆ ಹೋದರೆ ಏನು ಗತಿ ?" ಎಂದು ಯೋಚಿಸುತ್ತಿರುವಾಗಲೇ.. ಸ್ವಲ್ಪ ವಿಶಾಲವಾದ ಜಾಗ ಸಿಕ್ಕಿತು.. ಅಲ್ಲಿಯೇ ಉದ್ಭವ ಈಶ್ವರ ಲಿಂಗ ತಟಸ್ಥವಾಗಿ ನಿಂತಿದೆ.. ಭಕ್ತಿಯಲ್ಲಿ ಕೈ ಮುಗಿದು ಸುತ್ತಲು ಇದ್ದ ನೀರಿನಿಂದ ಈಶ್ವರ ಲಿಂಗಕ್ಕೆ ಜಲಾಭಿಷೇಕ ಮಾಡಿ ತೀರ್ಥವನ್ನು ತಲೆಗೆ ಸಿಂಪಡಿಸಿದೆವು. ಗೈಡ್ ನ ಮಾಹಿತಿಯಂತೆ ಅಲ್ಲಿ ಇದ್ದ ಮಣ್ಣಿನಿಂದ ದೇಹ ಲೇಪನ.. ಇದರ ಉದ್ದೇಶವೇನೆಂದರೆ ಚರ್ಮದ ಏನೇ ಕಾಯಿಲೆ ಇದ್ದರೂ ಅದನ್ನು ವಾಸಿ ಮಾಡಬಲ್ಲಂತ ಶಕ್ತಿ ಹೊಂದಿದೆ.. ಗುಹೆಯ ಚರಿತ್ರೆಯ ಪರಿಚಯ.. ಗುಹೆಯ ಒಳ ಭಾಗದಲ್ಲಿ "ನೆಲ್ಲಿಕಾಯಿ" ಯಂತ ಗಾತ್ರದ ನೀರು ಯಾವತ್ತೂ ಜಿನುಗುತ್ತಿರುತ್ತದೆ..ಇದುವೇ ಆ ಸ್ಥಳಕ್ಕೆ ಹೆಸರು (ನೆಲ್ಲಿ ತೀರ್ಥ) ಬರಲು ಕಾರಣ. ಸುಮಾರು ೨೦೦ ಮೀಟರ್ ಉದ್ದದ ಗುಹೆಯಿಂದ ವಾಪಸು ಬರಲು ಹೊರಟೆವು.. ತೆವಳಿಕೊಂಡೇ ಬರತೊಡಗಿದೆವು.. ಕೆಲವೇ ಕ್ಷಣದಲ್ಲಿ ಸೂರ್ಯನ ಪ್ರಕಾಶವು ನಮ್ಮನ್ನು ನೋಡಲಾರಂಬಿಸಿದವು.. ಪದ್ದತಿಯಂತೆ ಸ್ನಾನ ನಿಶಿದ್ದ .. ಒದ್ದೆ ಬಟ್ಟೆಯಲ್ಲಿ ಮೈ ಒರೆಸಿಕೊಂಡು ಬಟ್ಟೆ ಬದಲಾಯಿಸಿ ಸೋಮನಾಥೆಶ್ವರನ ಮಹಾಪೂಜೆಗೆ ಬೇಡಿ ನಿಂತೆವು.. ಆಗ ಸಮಯ ಸರಿಯಾಗಿ ಒಂದು ಗಂಟೆ.. ಮನಸ್ಸು ನಿರ್ಮಲವಾಗಿ ಕಲ್ಮಶಗಳೆಲ್ಲವೂ ಒಮ್ಮೆ ತಟಸ್ಥವಾದವು ..
ಪೂಜೆ ಮುಗಿಸಿ ಪ್ರಸಾದ ಭೋಜನ ಸ್ವೀಕರಿಸಿ ಬಹು ಸಂತಸದ ಅನುಭವದೊಂದಿಗೆ ತೆರಳಲು ಸಜ್ಜಾದೆವು..

ಅಲ್ಲಿಯ ಭಟ್ಟರ ಹೇಳಿಕೆಯಂತೆ ಮಧ್ಯಾನದ ನಂತರ ಯಾರನ್ನೂ ಗುಹೆಯ ಒಳಗಡೆ ಬಿಡುವುದಿಲ್ಲ.. ಆಗ ಸರಿಸೃಪಗಳ ಚಲನ ವಲನಗಳು.. ಒಮ್ಮೊಮ್ಮೆ ಗುಹೆಯಿಂದ ಹೊರಗೆ ಬರುವ ಸಾಧ್ಯತೆಗಳು ಇವೆಯಂತೆ.. ಇದನ್ನೆಲ್ಲಾ ಕೇಳಿ ಮೈ ಜುಮ್ ಎಂದಿತು.. ಆದರೆ ಗುಹೆಯ ಯಾತ್ರೆ ಮಾತ್ರ ಮನದಾಳದಿಂದ ಹೊರ ಎಸೆಯಲು ಸಾಧ್ಯವೇ ಇಲ್ಲ.. ಹೊಸ ಅನುಭವಗಳೊಂದಿಗೆ ನಮ್ಮ ನಮ್ಮಲ್ಲಿ ವಿನಿಮಯ ಮಾಡಿಕೊಳ್ಳುತ್ತ ಮನೆಗೆ ಹಿಂದಿರುಗಲು ಅಣಿಯಾದೆವು.. ನೆಲ್ಲಿ ತೀರ್ಥದಿಂದ ಸುಮಾರು ೧೦-೧೨ ಕಿಲೋ ಮೀಟೆರಗಳ ದೂರದಲ್ಲಿ ಅನಾನಸ್ ಫಾರ್ಮ್ ಹೌಸ್ ಇದೆ.. ಇದರ ಬಗ್ಗೆ ಜನರ ಒಳ್ಳೆ ಅಭಿಪ್ರಾಯ ಕೇಳಿ ಅದನ್ನು ಭೇಟಿ ಮಾಡಲು ಪ್ರಯಾಣ ಮುಂದುವರೆಸಿದೆವು.. ಅಪ್ಪಟ ಅನಾನಸ್ ರಸವು ಸಕ್ಕರೆ ಇಲ್ಲದೆ ಗಂಟಲಲ್ಲಿ ಇಳಿದಾಗ ಮನವು ತಂಪಾಯಿತು.. ಬಿಸಿಲಿನ ಧಗೆಗೆ ನೀರೆರೆಚಿದಂತಾಯಿತು..

ಎಲ್ಲಾ ಬಹು ಸುಂದರ ಅನುಭವಗಳೊಂದಿಗೆ, ಸೂರ್ಯನು ತನ್ನ ಮನೆಗೆ ತೆರಳಿದಂತೆ , ನಮ್ಮ ಮನೆಗಳಿಗೆ ನಾವೂ ತೆರಳಲು ಹೊರಟೆವು.. ನೆನಪುಗಳ ಮೂಟೆಯಲಿ... :) :)

"ನೆಲ್ಲಿ ತೀರ್ಥ " ಎಂಬ ಸ್ಥಳದ ಕುರಿತ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಗೆ ಭೇಟಿ ಕೊಡಿ.. http://www.nellitheertha.com/


ಸತ್ಯದ ಅನಾವರಣ .......


ಭಾವಗಳ ಲೋಕದಲಿ
ಚಲಿಸುತಿರುವೆ ಹಾಯಾಗಿ
ಬೇಗ ಬಂದೆನ್ನ ಸೆಳೆಯಲಿ
ನಾ ಒಬ್ಬ ಏಕಾಂಗಿ

ಲೋಕ ರೂಢಿಗೆ ಮಾಡದಿರು
ಮನುಷ್ಯತ್ವವ ಆವಿ
ಈ ಲೋಕದ ಕಟ್ಟು ಪಾಡಿಗೆ
ನಲುಗಿದಂತ ಜೀವಿ

ಅನ್ಯಾಯ ನರ್ತನವು
ಹಾಳಾಗಿ ಹಳಸಿತದುವು
ನೀತಿ ಮಾರ್ಗಕೆ ಹಿಡಿ ನೀನು
ಹೆಜ್ಜೆ ಗೆಜ್ಜೆಯಾ ತಾಳವನು

ಬಟ್ಟ ಬಯಲಾಯಿತೆ ನಮ್ಮವರ ನಿಜ ಬಣ್ಣ
ಅಸತ್ಯದ ಕನ್ನಡಿಯಲಿ ತೋರಿಹುದೆ ಅಣ್ಣ
ಸತ್ಯವದು ಮೌನವನು ತಬ್ಬಿರಲು
ಮಾತಾಡಿಸಬಾರದೇ ಎ೦ಬಳಲು

ಇರ ಬೇಕು ವದನದಲಿ
ಸಹಸ್ರ ನಗುವಿನ ಜೋಲಿ
ಪ್ರೀತಿ ಪ್ರೇಮ ಸಹಕಾರವೇ
ನಮ್ಮ ಜೀವನವ ಜೀಕುವ ಜೋಕಾಲಿ

ಮಂಗಳವಾರ, ಮಾರ್ಚ್ 6, 2012

ಮನ - ತಲ್ಲಣ







ಮನದಲ್ಲೆದ್ದ ತರಂಗದಲೆಗಳು
ಹೃದಯದಾಳಕ್ಕೆ ಇಳಿದವು
ಎಲ್ಲೆಡೆ ಪಸರಿಸಿ ಮನವ
ತಲ್ಲಣಿಸಿದವು

ಮಾಯಾಲೋಕವು ತನ್ನ
ಅಬ್ಬಾಳಿಕೆ ಸಾಧಿಸುತ್ತಿದೆ
ಕಂಗಾಲಾದ ಮನಸ್ಸು
ಲಜ್ಜೆಯಲಿ ನಾಚುತಿದೆ

ಬಹು ದೂರದಲ್ಲಿ ನಿಂತು
ಕಂಡು ಕಾಣರಿಯದ ರೂಪವು
ನನ್ನನ್ನೇಕೋ ಬಲವಂತದಲಿ
ಕಾಡಿಸುತಿರುವಂತೆ ಭಾಸವು

ಮಿಶ್ರ ರೂಪವು ಮನದಲ್ಲಿ
ಗೋಚಿಸುತಿರಲು
ಸಂತೃಪ್ತಿಯರಸುವಿಕೆಯಲಿ
ನಗುವಿನೊಂದಿಗೆ ಮೌನವು ಸಾಥಿಯಾಗಲು