ಬುಧವಾರ, ಏಪ್ರಿಲ್ 26, 2023

ಸಾವು-ತಪ್ಪು ಯಾರದು?

  (ನೈಜ ಘಟನೆಯಾಧಾರಿತ)


ಸರೋಜಾದೇವಿಯವರಿಗೆ ನಿದ್ದೆಯೇ ಬರುತ್ತಿಲ್ಲ. ಹಾಸಿಗೆಯ ಮೇಲೆ ಮಗ್ಗಲು ಬದಲಿಸಿದ್ದಷ್ಟೇ ಬಂತು. ನಿದ್ದೆಯ ಸುಳಿವಿಲ್ಲ. ಗಡಿಯಾರದ ಮುಳ್ಳು ಒಂದುವರೆ ಘಂಟೆಯನ್ನು ತೋರಿಸುತ್ತಿತ್ತು. ಪಕ್ಕದ ಕೋಣೆಯಲ್ಲಿ ಮಗ,ಸಂಪತ್, ಮಲಗಿದ್ದ. ಸರೋಜಾದೇವಿ ಹಾಗೂ ಸಂಜಯ ಇಬ್ಬರ ಮದುವೆಯಾಗಿ ಬಹಳ ವರ್ಷಗಳ ನಂತರ ಜನಿಸಿದ ಪ್ರೀತಿಯ ಮಗು. ಕಾಳಜಿ, ಪ್ರೀತಿ, ಮುದ್ದು ಅತಿಯಾಗೇ ಇತ್ತು. ಈಗ ಸಂಪತ್ ಓದು ಮುಗಿಸಿ ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಸರೋಜಾದೇವಿಯವರಿಗೆ ಆಗಲೇ ಅರವತ್ತು ವರ್ಷ ದಾಟಿತ್ತು. ಮಗನ ಮದುವೆಯು ಮುಂದಿನ ತಿಂಗಳಿನಲ್ಲಿ ಮಾಡಲು ಯೋಜಿಸಲಾಗಿತ್ತು. ಹೈಸ್ಕೂಲ್ ಓದುವಾಗಲೇ ಅಪ್ಪನನ್ನು ಕಳೆದುಕೊಂಡಿದ್ದ ಸಂಪತ್ತಿಗೆ ಜವಾಬ್ದಾರಿಯ ಹೊರೆ ಆಗಲೇ ಗೊತ್ತಾಗಿತ್ತು. 


ಸರೋಜಾದೇವಿಯವರ ಗೆಳತಿಯರ ಬಳಗದಲ್ಲಿ ಒಂದಿಷ್ಟು ಮಂದಿಗೆ ಸೊಸೆಯಂದಿರು, ಅಳಿಯಂದಿರು ಬಂದಿದ್ದರು. ಅವರಲ್ಲಿ ಒಂದಿಷ್ಟು ಜನರಿಗೆ ಸೊಸೆಯ ನಡೆಗಳು ಇಷ್ಟವಾಗುತ್ತಿರಲಿಲ್ಲ, ಮಗನ ಹೆಚ್ಚಿನ ಜವಾಬ್ದಾರಿಯ ಅರಿವಾಗದೆ ಆತನ ನಡವಳಿಕೆಯಲ್ಲಿ ಬದಲಾವಣೆ ಕಾಣುತ್ತಿದೆ ಎಂಬ ಕಳವಳ ಇವೆಲ್ಲ ದಿನನಿತ್ಯದ ಫೋನಿನ ಸಂಭಾಷಣೆಯಲ್ಲಿ ವಿನಿಮಯವಾಗುತ್ತಿತ್ತು. 


ಸಂಜೆಯ ವೇಳೆ ಹೊತ್ತು ಕಳೆಯಲು ಟಿವಿಯ ಮೊರೆ ಹೊಕ್ಕ ಸರೋಜಾದೇವಿ ನೋಡುತ್ತಿದ್ದ ಧಾರಾವಾಹಿಗಳಲ್ಲೆಲ್ಲ ಅತ್ತೆ,ಸೊಸೆ ವೈಮನಸ್ಸಿನ ಕಥೆಗಳೇ ಜಾಸ್ತಿ ಇದ್ದವು.  


ಮದುವೆ ವಿಜೃಂಭಣೆಯಿಂದ ಮುಗಿಯಿತು. ಸರೋಜಾದೇವಿಗೆ ಎಲ್ಲಿಲ್ಲದ ಆತಂಕ, ಕಳವಳ ಒಮ್ಮಿಂದೊಮ್ಮೆಗೆ ಶುರುವಾಯಿತು. ಮಗನ ಜೊತೆ ಸೊಸೆಯ ಕುರಿತಾದ ಭಿನ್ನಾಭಿಪ್ರಾಯವನ್ನೇ ದೂರುವ ಪರಿಪಾಠವಾಯಿತು. ಸಮಾಧಾನದ ನುಡಿಗಳು ಸಮಾಧಾನವನ್ನು ಮಾಡುತ್ತಿರಲಿಲ್ಲ. ದಿನದಿನವೂ ಇದೇ ಪರಿಸ್ಥಿತಿ ಮುಂದುವರೆಯಿತು. ಇದನ್ನು ಗಮನಿಸಿದ ಸಂಪತ್, ಸರೋಜಾದೇವಿಯ ಒಂದಿಷ್ಟು ಗೆಳತಿಯರನ್ನು ಸಂಪರ್ಕಿಸಲು ಪ್ರಯತ್ನಿಸಿದ. ತನ್ನಮ್ಮನಿಗೆ ಇರುವ ಸಮಸ್ಯೆಯೇನೆಂದು ತಿಳಿಯಲು ಯತ್ನಿಸಿದ. ಚಂದದ ಜೀವನವನ್ನು ಸಾಗಿಸಬಹುದಾಗಿದ್ದ ಸರೋಜಾದೇವಿ ಧಾರಾವಾಹಿಯ ಕಥೆಗೆ ದಾಸಳಾಗಿಬಿಟ್ಟರು. ಒಂದಿಷ್ಟು ಗೆಳತಿಯರ ಸೊಸೆಯಂದಿರ ಮೇಲಿನ ದೂರು ತನ್ನ ಸೊಸೆಗೂ ಸಾವರಿಸಿಬಿಟ್ಟರು. ದಿನದಿನವೂ ಇದೇ ಯೋಚನೆಯಲ್ಲಿ ಕುಗ್ಗುತ್ತಾ ಹೋದರು. ಗೆಳತಿಯರ ಪ್ರಯತ್ನ ಫಲಕಾರಿಯಾಗಲೇ ಇಲ್ಲ. ಇಲ್ಲದ ಸಮಸ್ಯೆಯನ್ನು ಊಹಿಸಿ, ಸೃಷ್ಟಿಸಿಕೊಂಡು ಮಾನಸಿಕವಾಗಿ ಕುಗ್ಗಿಹೋದರು. ಮಗ,ಸೊಸೆಯ ಸಂಸಾರದ ಕಡಲಲ್ಲಿ ತಾವು ಸುಖವಾಗಿ ಪ್ರಯಾಣಿಸಬೇಕಾದ ಸಮಯದಲ್ಲಿ ಸಾವನ್ನು ಎಳೆದುಕೊಂಡರು. 

ಯಾರೂ ಇಲ್ಲದ ಸಮಯದಲ್ಲಿ ನೇಣಿಗೆ ಶರಣಾಗಿಯೇ ಬಿಟ್ಟರು. 


ಪ್ರತಿ ವರ್ಷ ಅಮ್ಮನನ್ನು ನೆನೆಸಿ ಕಣ್ಣೀರಿಡುವ ಸಂಪತ್ ಹುಡುಗನಿಗೆ ಅಮ್ಮನ ಸಾವು ಕಣ್ಮುಂದೆ ಬರುತ್ತಲೇ ಇರುತ್ತಿರುತ್ತದೆ.

ಸೋಮವಾರ, ಆಗಸ್ಟ್ 16, 2021

ಏನೆಂದು ಹೆಸರಿಡಲಿ

 ಏನೆಂದು ಹೆಸರಿಡಲಿ

ಮರುದಿನವೇ ಹುಣ್ಣಿಮೆ, ಚಂದ್ರನ ಬೆಳಕು ಬೀದಿ ದೀಪವಿರದ ದಾರಿಯಲ್ಲಿ ಪ್ರಖರತೆಯನ್ನು ತೋರಿಸಿತ್ತು. ಮಲ್ಲಿಗೆಯ ಮೊಗ್ಗು ಬಿರಿದು ಚಂದ್ರನ ತಂಪಿಗೂ ಮಲ್ಲಿಗೆಯ ಕಂಪಿಗೂ ಬಂಧ ಏರ್ಪಟ್ಟಿತ್ತು.

ಬೆಳಗಿನ ಸುಸ್ತಿಗೂ ವಿರಮಿಸುವ ಸಮಯ. ಗೂಬೆಗಳ ಬೆಳಗಿನ ಸಮಯ. ಕೆಲಸ ಮುಗಿಸುವ ಜನರಿಗೆ ರಾತ್ರಿ ಕೊನೆ, ರಾತ್ರಿಯಿಂದನೇ ಕೆಲಸ ಶುರುವಾಗುವ ಜನರದು ಇನ್ನೊಂದು ಬಗೆ.

ಹೀಗೆ ಅದೆಷ್ಟೋ ರಾತ್ರಿಗಳು ಕಳೆದಿವೆ.ಯೋಚನೆಗಳೇ ಇರದೆ ಆಕಾಶವನ್ನೇ ದಿಟ್ಟಿಸುತ್ತಿದ್ದ.ಇಲ್ಲವೋ ಭಾವಗೀತೆಗಳ ಸರಣಿಯನ್ನು volumeಕಡಿಮೆಯಿರಿಸಿ ಕೇಳುತ್ತ ನಿದ್ರೆ ಹೋಗುತ್ತಿದ್ದ. ಓದುವ ಪುಸ್ತಕದಲ್ಲಿ ಬರುವ ಪಾತ್ರಗಳಲ್ಲಿ ಅವನನ್ನೇ ಕಂಡು ಭಾವನೆಗಳ ಯಾನ ಮಾಡಿ ಕಣ್ಣೀರು ಸುರಿಸಿದ್ದು, ನಕ್ಕಿದ್ದು ಇದೆ. ಎಲ್ಲಾ ಜಂಜಾಟಗಳನ್ನು ಬಿಟ್ಟು ಕ್ಷಣಕಾಲ ಒಂಟಿಯಾಗಿ ಕಳೆಯುವುದು ಅದ್ವಯ್ ನ ಇತ್ತೀಚೆಗಿನ ದಿನಚರಿಗಳಲ್ಲೊಂದು. ಆ ಸಮಯವನ್ನು ಪ್ರೀತಿಸುತ್ತಿದ್ದ,ಅದಕ್ಕಾಗಿ ಹಾತೊರೆಯುತ್ತಿದ್ದ. ಆ ಸಮಯದಲ್ಲಿ ಅವನಿಗೆ ಅವನೇ ಸಂಗಾತಿ, ಚಂದ್ರ ಚುಕ್ಕಿಗಳ ಆಕಾಶದಂತೆ.

ಆದರೆ, ಅದ್ವಯ್ ನಿಗೆ ಇಂದೇಕೋ ಬಾಲ್ಕನಿ ಬಿಟ್ಟು ಹೊರಡಲು ಮನಸಾಗುತ್ತಿಲ್ಲ. ಕಛೇರಿ ಕೆಲಸ ಮುಗಿದ ಮೇಲೆ ಮನೆಗೆ ಬಂದ ನಂತರ ಹೆಚ್ಚಿನ ಸಮಯ ಬಾಲ್ಕನಿಯಲ್ಲೇ ಕಳೆಯುತ್ತಿದ್ದ. ಬಿಸಿ ಬಿಸಿ ಚಹಾ, ಅದರ ಘಮ, ಕೈಯಲ್ಲೊಂದು ಪುಸ್ತಕ. ಬಾಲ್ಕನಿಯ ಜೋಕಾಲಿಯನ್ನು ಬಿಟ್ಟು ಏಳಲೂ ಮನಸ್ಸಾಗಲಿಲ್ಲ ಇವತ್ತು.ಜೋಕಾಲಿ ಜೀಕಿ ಜೀಕಿ ಅದ್ವಯ್ನ ಮನಸ್ಸು ಮತ್ತೆ ಕಾಲೇಜು ಹುಡುಗನ ವಯಸ್ಸಿಗೆ ಹಾರಿತು. ಇದು ಇಂದು ನಿನ್ನೆಯ ಮಾತಲ್ಲ. ಪ್ರತಿಸಲವೂ ಆ ದಿನಗಳನ್ನು ನೆನಪು ಮಾಡಿಕೊಂಡರೆ ಅದೇನೋ ಪುಳಕ. ಅದ್ವಯ್ ತಾನು ಎಲ್ಲಿದ್ದೇನೆಂಬ ಅರಿವು ಇರದಷ್ಟು ನೆನಪುಗಳ ಲೋಕದಲ್ಲಿ ತೇಲುತ್ತಿದ್ದ.

ಎಲ್ಲರ ಬಾಳಲ್ಲಿ ಗುಟ್ಟು ರಟ್ಟಾಗದ, ರಟ್ಟಾದರೂ ಹುದುಗಿದ ಕ್ಷಣಗಳು ಇರಲಾರದು. ಒಮ್ಮೊಮ್ಮೆ ಅಂತಹ ಕ್ಷಣಗಳು ಜೀವನಕ್ಕೆ ಸ್ಫೂರ್ತಿಯಾಗುತ್ತವೆ.

ಕಾಲೇಜು ವಿದ್ಯಾರ್ಥಿ ಜೀವನದ ಸುಂದರ ಘಟ್ಟ. ಹೊಸ ಹೊಸ ಭಾವನೆಗಳು ಚಿಗುರೊಡೆಯುವ ಸಮಯ.ಗಂಡಿಗೆ ಮೀಸೆ ಚಿಗುರುವ ಕಾಲ, ಹೆಣ್ಣಿಗೆ ಲಜ್ಜೆಯ ರಾಗ. ಕವಿವರ್ಯರು ಬರೆದಿದ್ದಾರೆ "ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸ್ಸು", ಈ ಭಾವಗೀತೆಯಲ್ಲಿ ಹದಿನಾರರ ವಯಸ್ಸಿಗೆ ಕಾಲಿಟ್ಟ ಹೆಣ್ಣಿನ ಸುಂದರ ಭಾವನೆಗಳನ್ನು ಬಿಂಬಿಸಿದ್ದಾರೆ.ರಾಗಬದ್ಧವಾಗಿ ಕೇಳುವ ಆ ಆನಂದವೇ ಚಂದ.

ಬಣ್ಣ ಬಣ್ಣದ ಕನಸುಗಳನ್ನು ಹೆಣೆಯುವ ಸಮಯ. ಸರಿ ತಪ್ಪುಗಳನ್ನು ಲೆಕ್ಕಿಸದೆ ಹೆಜ್ಜೆ ಇಡುವ ವಯಸ್ಸು. ಆ ಕಾಲದ ಚಲನಚಿತ್ರ, ಕ್ರಿಕೇಟ್ ಜಗತ್ತಿನ ದಿಗ್ಗಜರ ನಡೆ,ನುಡಿ, ವೇಷ ಭೂಷಣಗಳನ್ನು ಅನುಕರಿಸುವ ಹಂತ.ಒಂದು ಮಾತು ಜಾಸ್ತಿ ಹೇಳುವ ಹಾಗಿಲ್ಲ, ಒಂದು ಕಡಿಮೆ ಮಾತಾಡುವ ಹಾಗಿಲ್ಲ. ಅಪ್ಪ ಅಮ್ಮ ಹೇಳುವುದು ತಪ್ಪೆಂದು ಗ್ರಹಿಸುವ ಧಾವಂತ, ಚಂಚಲತೆಗೆ ಹೇಳಿಮಾಡಿಟ್ಟ ವಯಸ್ಸು. ಆ ವಯಸ್ಸಿನಲ್ಲಿ ನಿಯಂತ್ರಣ ಸಿಕ್ಕಿತೋ ಇಟ್ಟ ಹೆಜ್ಜೆಗೆ ದಿಟ್ಟ ದೃಷ್ಟಿಗೆ ಮೋಸವಾಗದು.ಲೋಕಾರೂಢಿ ಇದು.

ಕಾಲೇಜಿನ ಮೊದಲ ದಿನ. ದೂರದೂರಿಂದ ಬಂದ ಎಲ್ಲಾ ವಿದ್ಯಾರ್ಥಿಗಳ ಮಿಲನ. ಎಷ್ಟೋ ಜನರ ಪರಿಚಯ ಆಗಿರುತ್ತದೆ, ಕೊನೆಯಲ್ಲಿ ಹಾಸ್ಟೆಲ್ ಸಹಪಾಲಿಗರು ಜೊತೆಯಲ್ಲಿರುತ್ತಾರೆ. ಸುಂದರ ದಿನಗಳವು. ಆ ದಿನಗಳನ್ನು ಮೆಲುಕು ಹಾಕುವುದು ಅದ್ವಯನಿಗೆ ಆಪ್ತವಾಗಿತ್ತು.ಕಾಲೇಜಿನ ನೆನಪು ಬಂದಾಗ ಆತನಿಗೆ ಮೊಟ್ಟಮೊದಲಾಗಿ ಇಷ್ಟ ಪಟ್ಟ ಹುಡುಗಿಯ ನೆನಪು ಗಾಢವಾಗಿ ಕಾಡುತ್ತದೆ.

ಅವನ ನಿರ್ಜೀವ ನರಗಳೆಲ್ಲ ಪ್ರೀತಿಯನ್ನೇ ಸುರಿಸಿದಂತೆ ಆ ಕ್ಷಣವನ್ನು ಆಲಂಗಿಸುತ್ತಾನೆ. ಕಳೆದುಹೋದ ನೆನಪಿನ ಸಾಲುಗಳು ಭಾವಗೀತೆಯಾಗಿ ಮನದಾಳದ ಹುದುಗಿಟ್ಟ ಭಾವಕಂಪನಗಳನ್ನು ಮೇಲೈಸುತ್ತವೆ. ಒಂದು ರೋಮಾಂಚನ.

" ಯಾರೂ ಇರದ ಘಳಿಗೆಯಲ್ಲಿ ನಿನ್ನ ನೆನಪು ಬರುವುದು", ಮನಸ್ಸು ಸೋಲಿನಲ್ಲೂ ನಲಿಯುತ್ತದೆ.ಅಭಿಜ್ಞಾನದ ಭಾಸವಾಗುತ್ತದೆ. ಬಾಡಿದ ಗಿಡಕ್ಕೆ ನೀರುಣಿಸಿದಂತೆ ನೆನಪು ಹೊಸದಾಗಿ ಕಾಡುತ್ತದೆ.ಅವರದ್ದು ಹೆಸರಿಡದ ಸಂಬಂಧ, ಪ್ರೇಮಿಗಳಂತೆ ಬಿಂಬಿಸಿದರೂ ಪ್ರೇಮಿಗಳಲ್ಲ. ಆತನ ಪ್ರೀತಿಯ ವ್ಯಾಖ್ಯಾನವೇ ಬೇರೆ, ಇವಳದ್ದು ಬೇರೆ. ಕಾದಂಬರಿಗಳನ್ನು ಓದಿ ಭಾವನೆಗಳನ್ನು ಬೆಳೆಸಿಕೊಂಡ ಹದಿನಾರರ ಹುಡುಗಿ ಫಾಲ್ಗುಣಿ, ಸುಸಂಕೃತ ಮನೆತನದವಳು. ಮೌನವೇ ಮಾತಾಗಿ ನಗುವೇ ಭಾವವಾಗಿ ಎಲ್ಲರೊಡನೆ ಬೆರೆಯುತ್ತಿದ್ದಳು.

ಕರಾವಳಿ ತೀರದ ಬೆರಳೆಣಿಕೆಯಷ್ಟು ಮನೆಯಿರುವ ಗ್ರಾಮ. ಹೆಚ್ಚಿನ ಓದಿಗಾಗಿ ಊರು ಬಿಟ್ಟು ಪಟ್ಟಣಕ್ಕೆ ಹೋಗಲೇ ಬೇಕಾಗಿತ್ತು. ಕಾಲೇಜು ಕಲಿಕೆಗೆ ಬಸ್ ಸೌಕರ್ಯವಿರದ ಕಾರಣ ಹಾಸ್ಟೆಲ್ ಮೊರೆ ಹೋಗಬೇಕಾದಂತಹ ಪರಿಸ್ಥಿತಿ.

ಓದಿನಲ್ಲಿ ಚುರುಕಾಗಿದ್ದ ಹುಡುಗ ಅದ್ವಯ್, ತಾನೇನು ಕಮ್ಮಿಯಿಲ್ಲ ಎಂದು ಪೈಪೋಟಿ ನೀಡುವಷ್ಟು ಹುಷಾರಿ ಹುಡುಗಿ ಫಾಲ್ಗುಣಿ, ಒಂದೇ "ಊರು" ಎಂಬ ಕಾರಣಕ್ಕೆ ಅವರಿಬ್ಬರ ಮಧ್ಯೆ ಸ್ನೇಹ ಜನಿಸಿತು.

ಫಾಲ್ಗುಣಿಗೆ ಹಾಸ್ಟೆಲ್ ಊಟಕ್ಕೆ ನಾಲಿಗೆ ಜಿಡ್ಡುಗಟ್ಟಿ ಅಮ್ಮನ ಕೈ ಅಡುಗೆಯನ್ನು ಮರೆಯಲಾಗದೆ, ಒಗೆಯುವ ವಾರದ ಬಟ್ಟೆ ಗಂಟು ಕಟ್ಟಿ ಪ್ರತಿ ಭಾನುವಾರ ಮನೆಗೆ ಹೋಗಿ ಬರುವ ಪರಿಪಾಠವಾಗಿತ್ತು. ಅದ್ವಯ ಆರ್ಥಿಕವಾಗಿ ಕಷ್ಟದಲ್ಲಿದ್ದ.ಮನೆಗೆ ಸಹಾಯವಾಗಲೆಂದು ತನಗಿಂತ ಚಿಕ್ಕ ಮಕ್ಕಳಿಗೆ ಮನೆಪಾಠ ಹೇಳಿಕೊಡುವ ಪರಿಪಾಠ ಬೆಳೆಸಿಕೊಂಡಿದ್ದ ಅಲ್ಲದೆ ಅಪಾರ ಪ್ರೀತಿಯನ್ನೂ ಗಳಿಸಿಕೊಂಡಿದ್ದ.

ಓಡಾಟ, ಒಡನಾಟದಲ್ಲಿ ಪರೀಕ್ಷೆಯನ್ನು ಮುಗಿಸಿದರು.ಇಲ್ಲಿಂದನೇ ಮುಂದೆ ಅವರಿಬ್ಬರ ಬಾಂಧವ್ಯಕ್ಕೆ ತಳಹದಿಯಾಯಿತು.

ಮೊಬೈಲ್ ಭಾರತಕ್ಕೆ ಹೊಸ ಸಾಧನವಾಗಿದ್ದ ಕಾಲ ಅದು.ಅಂಗೈ ಅಳತೆಯ ಕಪ್ಪು ಬಿಳುಪಿನ ಜಂಗಮವಾಣಿ ಹೊಂದಿರುವುದು ವಿಶೇಷವಾಗಿದ್ದ ಜಾಯಮಾನ. ಆ ಸಮಯದಲ್ಲೇ ದಿನಕ್ಕೆ ಹತ್ತು ಸಂದೇಶಗಳನ್ನು ಉಚಿತವಾಗಿ ಕಳುಹಿಸಲು ಅವಕಾಶ ನೀಡುವ ಪೈಪೋಟಿಯಲ್ಲಿ service providers- Docomo,Hutch ಹೀಗೆ ಸಾಲು ಸಾಲು ಕಂಪನಿಗಳು, Reliance Company ಅತಿ ಕಡಿಮೆ ಬೆಲೆಯಿಂದ Network provider ರ ಸಾಲಿನಲ್ಲಿ ಅಗ್ರಸ್ಥಾನದಲ್ಲಿತ್ತು.

ಒಂದೊಂದು ಮಾತುಗಳಿಂದ ಶುರುವಾದ ಬಾಂಧವ್ಯ ರಾತ್ರಿ ಒಂದಾದರೂ ಮಾತು ಮುಗಿಯದರ ಮಟ್ಟಿಗೆ ಬೆಳೆಯಿತು. ಮುಂದಿನ ಅಭ್ಯಾಸಕ್ಕಾಗಿ ಈತ ಆರಿಸಿಕೊಂಡಿದ್ದು ಬೆಂಗಳೂರಿನ ಪ್ರತಿಷ್ಠಿತ ಕಾಲೇಜು,ಇವಳು ಅದರ ಪಕ್ಕದ ಮೈಸೂರಿನ ಇನ್ನೊಂದು ಪ್ರಸಿದ್ಧ ಕಾಲೇಜು, ಸ್ನೇಹ ಮುಂದುವರೆಯಿತು. ಆಗಲೇ ಪ್ರೀತಿಯೆಂಬ ಬೀಜ ಚಿಗುರೊಡೆದಿತ್ತು. ನೀರು,ಗೊಬ್ಬರವೂ ಹೇರಳವಾಗಿತ್ತು. ಮೊದಲ ಪ್ರೇಮಾಂಕುರ ವರ್ಷದ ಮೊದಲ ಮಳೆಯಂತೆ. ಒಬ್ಬೊಬ್ಬರಿಗೆ ಮಣ್ಣಿನ ಕಂಪು ಇಷ್ಟವಾದರೆ, ಬೇರೊಬ್ಬರಿಗೆ ಅಸಹ್ಯವಾಗುವುದು. ಇಲ್ಲಿ ಅದ್ವಯ್-ಫಾಲ್ಗುಣಿಗೆ ಕಷ್ಟವಿಲ್ಲದೆ ಇಷ್ಟವಾಗಿದೆ.

ಕಾಲೇಜಿನಲ್ಲಿ ಕಲಿಕೆಯ ವಿಷಯ ಇಬ್ಬರದ್ದೂ ಒಂದೇ ಆಗಿತ್ತು. ಪರೀಕ್ಷೆಯ ಸಮಯದಲ್ಲಿ ಚರ್ಚಿಸುತ್ತಿದ್ದ ಹಳೆಯ ವರ್ಷಗಳ ಪರೀಕ್ಷಾ ಪತ್ರಿಕೆಗಳ ಪ್ರಶ್ನೆಗಳಿರಬಹುದು,ಕಾಲೇಜಿನಲ್ಲಿ ನಡೆದ ಗಂಭೀರ, ತಮಾಷೆಯ ಘಟನೆಗಳ ವಿನಿಮಯ ಇರಬಹುದು.. ಸಂಬಂಧವನ್ನು ಇನ್ನೂ ಬೆಳೆಸಿತು. ಇವನು network ಇರದ ಊರಿಗೆ ಪ್ರವಾಸಕ್ಕೆ ಹೋದಾಗ ಇವಳ ಕಷ್ಟ ಹೇಳತೀರದು. ದಿನನಿತ್ಯದ ಮಾತುಕತೆಗೆ ಎಷ್ಟು ಒಗ್ಗಿಹೋಗಿದ್ದರೆಂದರೆ ಕ್ಷಣಕ್ಷಣಕ್ಕೆ ಇರುವು, ಸನಿಹ ಬೇಕೆನಿಸುವಷ್ಟು. ಎಲ್ಲೇ ಇರಲಿ, ಎಲ್ಲೇ ಹೋಗಲಿ ಕಾಡುವಂತಹ ನೆನಪುಗಳು.ವಯಸ್ಸಿಗನುಗುಣವಾಗಿ ಭಾವನೆಗಳು ಮಾರ್ಪಾಡು ಹೊಂದಿದವು. ತುಸು ಜಾಣೆಯಾದ ಫಾಲ್ಗುಣಿಯು ಮನೆಯವರು ಹಾಕಿದ್ದ ಗೆರೆಯನ್ನು ಮೀರಲು ಹೋಗಲಿಲ್ಲ. ಅಷ್ಟೇ ಸಂಭಾವ್ಯ ವ್ಯಕ್ತಿಯಾಗಿ ಅದ್ವಯ್ ಬೆಳೆಯುತ್ತಿದ್ದ. ಇವರಿಬ್ಬರ ಸಂಬಂಧ ಮೊಬೈಲಗಷ್ಟೇ ಗೊತ್ತಿತ್ತು. ಸಂಭಾಷಣೆಗಳೆಲ್ಲವೂ Network provider database ಸೇರಿದ್ದವು. ಎರಡು ಗಂಟೆಗಳನ್ನು ಪ್ರಯಾಣಿಸಿದರೆ ಸಾಕಾಗಿತ್ತು ಭೇಟಿಗೆ, ಭೇಟಿಯೇ ತಪ್ಪಾದೀತು ಎಂದು ಭಾವಿಸುವ ಆಕೆಯ ಅಂಜಿಕೆಗೆ ಅದ್ವಯ್ ನ practical ಯೋಚನೆಯ ಸಮಾಧಾನ. ಈ ಬೇಕು ಬೇಡಗಳ ಭಾವನೆಗಳ ನಡುವೆ ದಿನ ಕಳೆಯುತ್ತಿತ್ತು.ನಗು,ಬೇಸರ, ವಿರಹಗಳೂ ಜೊತೆಯಾದವು.

ವರುಷಗಳೂ ಉರುಳಿದವು. ಕಾಲೇಜಿನ ದಿನಗಳ ಪುಸ್ತಕದಲ್ಲಿ ಇನ್ನೂ ಮಿಕ್ಕಿದ್ದವು ಕೆಲ ಪುಟಗಳು.ಪುಟಗಳಲ್ಲಿ ಕಪ್ಪುಅಕ್ಷರಗಳಿಗಿಂತ ಬಣ್ಣ ಬಣ್ಣದ ಅಕ್ಷರಗಳಿದ್ದವು. ಪುಟ ತಿರುವಿದಾಗ ಬಣ್ಣದೋಕುಳಿಯನ್ನೇ ಸೃಷ್ಟಿಸಬಹುದಾಗಿತ್ತು. ಇವೆಲ್ಲರ ಮಧ್ಯೆ ಅದ್ವಯ್ ನ ಅಮ್ಮನಿಗೆ ಆಯೋಗ್ಯದಲ್ಲಿ ಏರುಪೇರಾದಾಗ ಫಾಲ್ಗುಣಿಯ ಸಹಕಾರದ ಆಸ್ಪತ್ರೆಯ ತಿರುಗಾಟ ಅವನ ಆತ್ಮಬಲವನ್ನು ವೃದ್ಧಿಸಿತು.ಭಿನ್ನತೆಯಲ್ಲೇ ಜಗಳ ಹಾಗೂ ಸರಸ, ಇದುವೇ ಬಾಳಿನ ಸಾರ. ಅದೇಕೋ ಕಾಣೆ, ಮದುವೆಯ ತನಕ ಹೋದ ಅವರಿಬ್ಬರ ಸಂಬಂಧ ಅಲ್ಲಿಗೇ ನಿಂತಿತು. ಕಾರಣ ಹುಡುಕಲು ತಯಾರಿರಲಿಲ್ಲ. ಕೆಲಸಕ್ಕೆ ಸೇರಿದ ಫಾಲ್ಗುಣಿಯು ಅದ್ವಯ್ ಜೊತೆಗಿನ ಮಾತುಕತೆಯನ್ನು ಕಡಿಮೆ ಮಾಡಿದಳು. ಈ ಕಡೆ, ಅದ್ವಯ್ ಮನೆಯ ಜವಾಬ್ದಾರಿಯ ನೆಪ ಹೇಳಿ Corporate ಜೀವನದ ಏಳ್ಗಗೆ ಹಗಲಿರುಳು ದುಡಿದ. ಬೆಂಗಳೂರಿನಲ್ಲಿ ಫ್ಲಾಟನ್ನು ಕೊಂಡುಕೊಳ್ಳುವರ ಮಟ್ಟಿಗೆ ತನ್ನನ್ನು ಕೆಲಸದಲ್ಲಿ ತೊಡಗಿಸಿಕೊಂಡಿದ್ದ.

ಅದ್ವಯ್ ನ ಜೀವನದಲ್ಲಿ ಆಫೀಸು, ಮನೆ ಜಂಜಾಟದಲ್ಲಿ ಎರಡು ವರ್ಷಗಳು ಕಳೆದೇ ಹೋದವು . ಫಾಲ್ಗುಣಿ ಮನೆಯಲ್ಲಿ ಮದುವೆಯ ಸಿದ್ಧತೆ ಶುರುವಾಯಿತು.ತಕರಾರಿರಲಿಲ್ಲ ಅವಳಿಗೆ. ಅದ್ವಯ್ ಮಾತ್ರ ಚಡಪಡಿಸಿದ.

ಆದರೆ ಮದುವೆಯೆಂಬ ಕಟ್ಟುಪಾಡಿಗೆ ಸಿಗದೇ ಇರುವ ಸಂಬಂಧಕ್ಕೆ ಫಾಲ್ಗುಣಿ-ಅದ್ವಯ್ ಸಾಕ್ಷ್ಯ ಬರೆದರು.ಒತ್ತರಿಸಿಕೊಂಡ ಭಾವನೆಗಳು ಒಟ್ಟಾಗಿ ಕಣ್ಣೀರಿನ ರೂಪದಲ್ಲಿ ಕಣ್ಣಿನ ತುದಿಗೆ ಬಂದು ತೊಟಕ್ಕನೆ ಜಾರಿ ಬಿತ್ತು. ಅದ್ವಯ್ ವಾಸ್ತವಕ್ಕೆ ನಿಧಾನವಾಗಿ ಬಂದಿಳಿದ.ಪ್ರತಿಸಲದಂತೆ ಈ ಸಲವೂ ಮುಖದಲ್ಲಿ ನಗು ಬರದಿರಲಿಲ್ಲ ಆ ಕಣ್ಣೀರಿಗೆ, ವಿಧಿ ಲಿಖಿತ ಹೀಗಿರುವಾಗ ಯಾರನ್ನು ಜರಿದರೇನು ಪ್ರಯೋಜನ.

ಅದ್ವಯ್ ಗೆ ಮದುವೆ ನಿಕ್ಕಿಯಾಗಿದೆ, ಫಾಲ್ಗುಣಿ ಗಂಡನೊಂದಿಗೆ ಸುಖಿಯಾಗಿ ಸಂಸಾರ ನೌಕೆಯನ್ನು ನಡೆಸುತ್ತಿದ್ದಾಳೆ. ಅವಳ ಮುಂದಿನ ದಾರಿ -ಅವಳಿಷ್ಟದ ವಿಭಾಗಗಳಲ್ಲಿ ಮುಂದುವರೆಯಲು ಅವಳ ಗಂಡನ ವಿರೋಧವಿಲ್ಲ.ಅಪರೂಪಕ್ಕೊಮ್ಮೆ ಅದ್ವಯನೊಟ್ಟಿಗೆ ಮಾತುಕತೆ ,ಸಂದೇಶಗಳ ಸಂಚಾರ, Feb 14ಗೆ ಅವನಿಗೆ ನೆನಪಾಗುವಳು ಫಾಲ್ಗುಣಿ. ಇಲ್ಲಿ ದ್ರೋಹವಿರದ ಸಂಬಂಧ ಇನ್ನೂ ಗಟ್ಟಿಯಾಗಿದೆ, ಹತ್ತಿರವಾಗಿದೆ.ಇಬ್ಬರ ಬಾಳಲ್ಲೂ ಚ್ಯುತಿ ಬರದಂತೆ ಜವಾಬ್ದಾರಿಗಳು ನೆರವೇರುತ್ತಿವೆ.ಕಾಲೇಜಿನ ದಿನಗಳು ಕನಸುಗಳಂತೆ ಕಾಡಲಿ ಎಂದು ಹಾಗೇ ಬಿಟ್ಟಿದ್ದಾರೆ. ಅಲ್ಲಿ ಕೊನೆಯಾಗದ ಎಷ್ಟೋ ಭಾವನೆಗಳಿವೆ, ನಿಸ್ತೇಜಗೊಂಡ ಕಣ್ಣ ನೋಟಗಳಿವೆ .ಸರಿಪಡಿಸಲು ಹೋಗಲಿಲ್ಲ. ಮಾತನ್ನು ಮುಂದುವರೆಸುವ ಇರಾದೆ ಇಬ್ಬರಲ್ಲೂ ಉಳಿದಿಲ್ಲ.

ಹಳೆಯ ನೆನಪುಗಳು ಮುದ ನೀಡಬೇಕೆಂದು ಒಪ್ಪಂದವಿಲ್ಲದ ಹೇಳಿಕೆ ಅದಕ್ಕಾಗಿ ಜಗಳವಿಲ್ಲ,ಮುನಿಸಿಲ್ಲ.ನೈತಿಕತೆಯನ್ನು ಮೀರದ ಸಂಬಂಧ ಗೊತ್ತಿದ್ದೂ ಗೊತ್ತಿಲ್ಲದೆ ಇದೆ.

ಈ ಸಂಬಂಧಕ್ಕೊಂದು ಬೆಲೆಯಿದೆಯಾ?ಖುಷಿ ಭಾವದೊಂದಿಗೆ ಹೊಸ ಜೀವನದ ಕನಸಿನೊಂದಿಗೆ ಹಳೆ ಕನಸನ್ನು ಬೆಸೆಯಲು ಅದ್ವಯ್ ಮತ್ತೆ ಮತ್ತೆ ನಿರ್ಧರಿಸಿ ಮಲಗಲು ಹೋದ. ಜೀಕಿ ಬಿಟ್ಟ ಜೋಕಾಲಿ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಹೊಯ್ದಾಡುತ್ತಿತ್ತು.

ನಕ್ಷತ್ರಗಳು ಮಿನುಗಿದವು, ದೊಡ್ಡದಾಗಿ ಕಾಣುತ್ತಿದ್ದ ಚಂದ್ರ ಮೋಡದೊಳಗೆ ಸರಿದು ಹೋದ. ಸಂಭಾಷಣೆಯಿರದ ಕತೆಯು ನಿಶ್ಯಬ್ದ ರಾತ್ರಿಯಲ್ಲಿ ಸಂಚಲನ ಸೃಷ್ಟಿಸಿತು;ಬಾಲ್ಕನಿ ಸಾಕ್ಷಿಯಾಯಿತು.

एक प्यार का नगमा है

मौजों की रवानी है

एक प्यार का नगमा है

मौजों की रवानी है

जिंदगी और कुछ भी नहीं

तेरी मेरी कहानी है



ಗುರುವಾರ, ಜೂನ್ 29, 2017

FB posts-more

ಅಕ್ಕರೆ

ಅಕ್ಕರೆಯ ಬಯಲದು
ಅಮ್ಮನ ತೊಡೆಯದುವು
ಕಿಂಚಿತ್ತು ಭಯವಿರದು...
ಅವಳೊಡನೆ ನಾನಿರಲು



ಮನ

ಒಡಲೊಳಗೆ ತುರುಕಿರುವೆ ನನ್ನೊಳ ಭಾವನೆಯ
ಇಂದೇಕೊ ಪರಿಪರಿಯ ಯಾತನೆಗೆ
ನನ್ನ ಬಳಿ ಕರೆದಿರುವೆ...
ಹಿಸುಕಿರುವೆ ಅದುಮಿರುವೆ ನನ್ನದೆಯ ಆಸೆಯ
ಭಾವನೆಯ ಗೋರ್ಗರೆತಕೆ ಕಣ್ಣೀರ ತಂಪೆರೆದಿರುವೆ



ಉತ್ಸಾಹ

ದಿನ ಕಳೆದ೦ತೆ ಬರವಣಿಗೆಯಲ್ಲಿ ವ್ಯತ್ಯಾಸ
ಕಾಣ ಸಿಗದು ಇ೦ದಿನದಲಿ
ಹಳೆ ರಚನೆಯಲ್ಲಿನ ರಸ ಭಾವ
ಕರಗಲಿಲ್ಲ ಬರೆಯಬೇಕೆ೦ಬ ಉತ್ಸಾಹ...
ತು೦ಬಬೇಕಿದೆ ನನ್ನಲ್ಲಿ
ವಿಚಾರಗಳ ನವ ಭಾವ

ಪದ ಪ್ರಯೋಗದಲ್ಲಿನ ಸ್ಥಾನ ಪಲ್ಲಟ
ಉದ್ಧರಿಸಬೇಕಿದೆ ಶೈಲಿಯ
ಜೋಡಿಸುವ ಅಗಾಧ ಕಲ್ಪನೆಗಳ ತಾಣ

 

ಬುಧವಾರ, ಜೂನ್ 28, 2017

ಹ್ರದಯ ವಿಶಾಲತೆ

ಜೀವನ ಸೀರಿಯಲ್ ಅಲ್ಲ
ಸೀರಿಯಲ್ಲೇ ಜೀವನವಲ್ಲ
...
ಹಗೆ ಹಲ್ಲೆ ಹೊಟ್ಟೆ ಉರಿ ಇಂದ ನೆಮ್ಮದಿಯ ಅಂತ್ಯ
ಪ್ರೀತಿ ಪ್ರೇಮ ಆಸರೆಯ ಕಾಳಜಿ ಇಂದ
ವ್ಯವಹರಿಸುವುದು ಮುಖ್ಯ
ತಿಲದಷ್ಟು ಹೋಲಿಕೆ ಮಾಡದಿರು
ಕಾಣುವುದೆಲ್ಲದರಲಿ ಸರಿ ತಪ್ಪು ಇರದು

ಸಾಲುಗಳು - ಅಪೂರ್ಣ


ಅವನಂತೆ ನಾನಿಲ್ಲ
ನನ್ನಂತೆ ಅವನಿಲ್ಲ
ಸ್ನೇಹ ಪ್ರೀತಿಗೆ ಕೊರತೆ ಇಲ್ಲ
...
ತಪ್ಪು ಸರಿಯ ತಿಕಲಾಟ
ನೆಮ್ಮದಿಗೆ ಹುಡುಕಾಟ
ಬಿಡು ನೀನು ಅವರವರ ಭಾವಕ್ಕೆ
ಅವರಂತೆ ನಾನಿಲ್ಲ
ನನ್ನಂತೆ ಅವರಲ್ಲ

ಆರ್ತನಾದ


ಕೂಗಿ ಹೇಳ ಬೇಕೆನಿಸಿದೆ
ಮನದಾಳದ ನೋವ
ಬರಲೊಪ್ಪುತ್ತಿಲ್ಲ ಕಣ್ಣೀರು
...
ಸಾಂತ್ವನಕೆ ಹಾತೊರೆಯುತಿದೆ
ಮರುಗುತ್ತಿರುವ ಪ್ರೀತಿ
ಸಿಗುತಿಲ್ಲ ಅಪ್ಪುಗೆಯ ಹಿಡಿತ
~~~~
ಸುಂದರ ನನಸಿಗಾಗಿ ಕಾಯುತಿವೆ
ಭಾವನೆಯ ಕಣ್ಣುಗಳು
ಭಾವಗಳ ಸಮ್ಮಿಲನಕೆ ಹರಿತಪಿಸಿವೆ
ಚಾಚಿದ ತೋಳುಗಳು
ಮನದಾರ್ತನಾದವ ಮರೆ ಮಾಚಿಸುತಿವೆ
ಮೊಗದ ನಗು

ಕನ್ನಡ

ಕನ್ನಡ ಎಂದೊಡೆ ಮೈ ನವಿರೇಳುವುದು
ಕವಿತೆ ಬರೆಯಲು ಹೊರಟರೆ ಪದಗಳು
ಒಂದೊಂದರಂತೆ ಜೋಡಣೆಗೊಳ್ಳುವವು

ಕನ್ನಡ ನುಡಿ ಚಂದ...
ಕನ್ನಡಿಗರ ಮನ ಚಂದ

ಕಲಿವ ಮೊದಲ ಭಾಷೆ ಕನ್ನಡವಾಗಲಿ
ಗೌರವಿಸುವ ಭಾವ ನಮ್ಮದಾಗಲಿ