ಗುರುವಾರ, ಅಕ್ಟೋಬರ್ 31, 2013

ದೀಪ ಸಾಲುಗಳ ಹಬ್ಬದ ಸಂತೋಷಕ್ಕೆ ಎದುರುಗೊಳ್ಳುತ್ತ



ಈ ಬಾರಿ ದೀಪಾವಳಿ , ೪ ರಜೆಯೊಟ್ಟಿಗೆ ಬಂದಿದೆ. ಸಂತೋಷ್ ಸಂಭ್ರಮ ಎಲ್ಲೆಡೆ ಪಸರಿಸಿ ದೀಪದ ಅಂದದಿಂದ ಸಿಂಗಾರಗೊಳ್ಳಲು ಕಾತರಿಸಿದೆ. ಹಣತೆ ತುಂಬಾ ಎಣ್ಣೆ ತುಂಬಿ, ನೆಣೆ (ಬತ್ತಿ)ಇಂದ ಬೆಳಕು ಹರಡಲು ಎಲ್ಲೆಡೆ ಹಣತೆಯ ಮಾರಾಟ. ಮನೆಯ ಆವರಣದ ಸುತ್ತ ಬಗೆ ಬಗೆಯ ಆಕಾರದಿಂದ ಹಣತೆ ಇಟ್ಟು ದೀಪದ ಚಿತ್ರ ಬಿಡಿಸಲು ನಾವೆಲ್ಲಾ ಸಜ್ಜಾಗುತ್ತಿದ್ದ ಪರಿ ದೀಪಾವಳಿ ಹಬ್ಬಕ್ಕೆ ನಾಂದಿ ಹಾಡುತ್ತಿದೆ. ಅಪ್ಪ ಯಾವಾಗ ಪಟಾಕಿ ಡಬ್ಬ ತರುತ್ತಾರೋ ಎಂದು ತದೇಕ ಚಿತ್ತದಿಂದ ಬಾಗಿಲ ಬಳಿ ಕಾಯುವ ಆ ನಮ್ಮ ಬುದ್ಧಿಗೆ ತಮಾಷೆ ಮಾಡುವ ಅಂತ ಅನಿಸುತ್ತಿದೆ  ವಾಲೆ ಪಟಾಕಿ(ತುದಿಯಲ್ಲಿ ಬತ್ತಿ ಇದ್ದು ಅದನ್ನು ಹಿಡಿಯಲು ಉದ್ದದ ಹಿಡಿಕೆ) ಇಂದ ಸುರ್ಚಂದ್ರ ಕಡ್ಡಿ (ನಕ್ಷತ್ರ ಕಡ್ಡಿ) , ಆನೆ ಪಟಾಕಿ , ದಢಾಕಿ ಸರ ಎಲ್ಲವನ್ನು ಸಿಡಿಸಿ ವಾತಾವರಣವನ್ನು ಕಲುಶಿತಗೊಳಿಸುತ್ತಿದದ್ದು ಈಗ ಬೇಸರ ತರಿಸುತ್ತದೆ  ಆದರೆ ಅದರಿಂದ ಒಟ್ಟುಗೂಡಿ ಖುಷಿಯಿಂದ ಪಟಾಕಿ ಸಿಡಿಸುತ್ತಿದ್ದ ರೀತಿ ದೀಪಾವಳಿಯ ಹಬ್ಬಕ್ಕೆ ಮೆರುಗು ಕೊಡುತ್ತಿತ್ತು. 

ಹಂಡೆಗೆ ನೀರು ತುಂಬಿಸುವುದು ,ಬಲೀಂದ್ರನಿಗೆ ಮೀಸೆ ಬರೆಯುವುದು,ಎಣ್ಣೆ ಸ್ನಾನ , ಚಿಕ್ಕಪ್ಪನ ಅಂಗಡಿ ಪೂಜೆ(ಅದಕ್ಕಿಂತ ಮೊದಲು ಅಂಗಡಿ ಸ್ವಚ್ಛಗೊಳಿಸುವುದು), ಕರ್ಕಿಯ ಪರಿಚಯದವರ ಎಲ್ಲರ ಅಂಗಡಿ ಪೂಜೆ ಮುಗಿಸಿ ಮನೆ ಸೇರುವಾಗ ಎನೋ ಸಮಾಧಾನ, ಸಂತೋಷ. ಹೊಸ ಅಂಗಿ ತೊಟ್ಟು ಖುಷಿಯಿಂದ ಕುಪ್ಪಳಿಸುತ್ತಿದ್ದ ಕ್ಷಣಗಳು ಈಗಿನ ಕಾಲದಲ್ಲಿ ದಿನ ಹೊಸ ಅಂಗಿ ಖರೀದಿಸಿ ಖುಷಿ ಪಡುವ ಕ್ಷಣಕ್ಕಿಂತ ಭಿನ್ನವಾಗಿತ್ತು.. ಹಬ್ಬ ಬಂತೆಂದರೆ ಹೊಸ ಬಟ್ಟೆ , ಎಲ್ಲ ಬಂಧು ಬಾಂಧವರ ಮಿಲನ.

ಇಷ್ಟೆಲ್ಲಾ ಖುಷಿ ಸಂತೋಷದ ದೀಪಾವಳಿ ಹಬ್ಬದ ದೀಪಗಳು ಸಾರುವ ಜ್ಞಾನ , ಅಂಧಕಾರವನ್ನು ಓಡಿಸುವ ಬೆಳಕನ್ನು ಪಸರಿಸುವ ಹಬ್ಬಕ್ಕೆ ನಾವು ನೀವೆಲ್ಲ ಸನ್ನದ್ಧರಾಗಿ ಸುರಕ್ಷತೆ ಪೂರಕವಾಗಿ ಹಬ್ಬವನ್ನು ಆಚರಿಸೋಣ 

(ಒಂದು ದಿನ ಮುಂಚಿತವಾಗಿ )ದೀಪಾವಳಿ ಹಬ್ಬದ ಶುಭಾಶಯಗಳು 


ಚಿತ್ರ ಕೃಪೆ : ಗೂಗಲ್