ನಾನೇನು ಹೊಸ ವಿಷಯ ಬಳಸಿ ಏನನ್ನೋ ಹೇಳಲು ಹೊರಟಿಲ್ಲ..ದಿನನಿತ್ಯದಲ್ಲಿ ನಾವು ನೀವು ಚಿಂತೆ ಮಾಡಿ ಇದು ಆಗಿ ಹೋಗುವುದಲ್ಲ ಎಂಬ ನಿಟ್ಟುಸಿರು ಬಿಟ್ಟು ದೈನಂದಿನ ಕಾರ್ಯದಲ್ಲಿ ತೊಡಗಿಕೊಳ್ಳುವುದು ವಾಡಿಕೆ. ಅದೇ ವಿಷಯ .. ಕಾಲ ಬದಲಾವಣೆ .
ಸಂಜೆ ೪ ರ ಸಮಯ.. ಆಫೀಸಿನಲ್ಲಿ ಕೂತು ಬೇಸರವೆನಿಸಿ ಸುಮ್ಮನೆ ವಿಶಾಲವಾದ ಸ್ಥಳಕ್ಕೆ ಹೋಗಲು ನಿರ್ಧರಿಸಿದೆವು. ಕೈಯಲ್ಲಿ ಬಿಸಿ ಬಿಸಿ ಚಹದ ಲೋಟ ಹಿಡಿದು ತಣ್ಣನೆಯ ಗಾಳಿ ಸೇವನೆ ನಮ್ಮ ವಿಶ್ರಾಮದ ಘಳಿಗೆಗೆ ಮತ್ತಷ್ಟು ಮೆರುಗು ಕೊಟ್ಟಿತು. ಒಬ್ಬೊಬ್ಬರು ಒಂದೊಂದು ಮಾತುಗಳನಾಡಲಿಕ್ಕೆ ಶುರು ಮಾಡಿದರು. ನಮ್ಮ ಕೆಲಸ ಹೀಗೆ, ನಮ್ಮ ಮ್ಯಾನೇಜರ್ ಹೀಗೆ ಹಾಗೆ ಎಂಬಿತ್ಯಾದಿ ವಿಚಾರಗಳು.
ಇದೆಲ್ಲವನ್ನು ಒಮ್ಮೆ ನೆನೆಸಿಕೊಂಡರೆ ನೆಮ್ಮದಿಯ ಬದುಕಿಗೆ ನಾಂದಿ ಹೇಳುವ ಭಾವನೆ. ನಮ್ಮ ಅಪ್ಪ ಅಮ್ಮಂದಿರು ಹೇ ತ್ತಿದ್ದರು..ನಮ್ಮ ಕಾಲದಲ್ಲಿ ಹೀಗೆ ಇರಲಿಲ್ಲ..ಈಗ ಎಲ್ಲವೂ ಬದಲಾಗಿದೆ ಎಂದು. ಅದು ೩೦-೪೦ ವರ್ಷಗಳ ತರುವಾಯ.. ಆದರೆ ನಮ್ಮ ೨೦ ವರ್ಷಗಳ ಬದುಕಿಗೆ ನಾವು ಅವರಂತೆ ಮಾತನಾಡುವ ಕಾಲ ಸನಿಹವಾಗಿದೆ. ಶಾಲಾ ಕಾಲೇಜ್ ಇಂದ ಶುರುವಾಗಿದ್ದು. ಕನ್ನಡ ಮಾಧ್ಯಮದಲ್ಲಿ ಅದೂ ಸಹ ಸರ್ಕಾರಿ ಶಾಲೆಯಲ್ಲಿ ವರ್ಷಕ್ಕೆ ಅಬ್ಬಬ್ಬ ಎಂದರೆ ೩೦೦-೪೦೦ ರೂಪಾಯಿ ಖರ್ಚು ಮಾಡಿ ಕಲಿತಿದ್ದ ಕಾಲ ಇನ್ನಿಲ್ಲವಾಗಿದೆ. ಚಿಕ್ಕ ಮಕ್ಕಳಿಗೆ ಇಂಟರ್ವ್ಯೂ ಬೇರೆ ಏಗ. ಅದರೊಟ್ಟಿಗೆ ಲಕ್ಷಗಟ್ಟಲೆ ಕೊಟ್ಟು ಅಪ್ಪ ಅಮ್ಮನೂ ಇಂಟರ್ವ್ಯೂ ಗೆ ಸಿದ್ದರಾಗಬೇಕು.. ಅಲ್ಲದೆ ಅಪ್ಪ ಅಮ್ಮ ಇಬ್ಬರೂ ಕೆಲಸದಲ್ಲಿರಬೇಕು.. ಇಷ್ಟೆಲ್ಲಾ ಮಾಡಿ ಹೆಗಲಿಗೆ ಮಣ ಭಾರದ ಚೀಲ ಹಾಕಿ ಅಮ್ಮನಿಗೆ ಬೈ ಮಾಡಿ ಹೋಗುವ ಕಂದಮ್ಮಗಳು ಕಣ್ಣೆದರಿಗೆ ಕಾಣುತ್ತವೆ. ವಿಧಿ ಇಲ್ಲದೆ ಇಂತಹ ಪರಿಸ್ಥಿತಿಗೆ ಒಗ್ಗೂಡಬೇಕಾಗಿದೆ . ನಮ್ಮ ಶಾಲಾ ಜೀವನವೇ ಹಳ್ಳಿಯ ಸೊಗಡಿದಿಂದ ಕೂಡಿರುತ್ತಿತ್ತು.. ಶಾಲಾ ಅಕ್ಕೋರು ಬಾಯೋರು ಮಾಸ್ತರರ ಪ್ರೀತಿ ತುಂಬಿದ ಪಾಠಗಳು, ಆಟೋಟಗಳು ಈಗಿನ ಕಾಲದ ಮಕ್ಕಳಿಗೆ ಸಿಗುತ್ತೋ ಇಲ್ಲವೋ ತಿಳಿಯದು. ಆದರೆ ಈಗಿನ ಕಾಲದ ಮಕ್ಕಳ ಸಮಯ ಕಳೆಯುವ ಪರಿಪಾಠ ಕಂಪ್ಯೂಟರ್ ಮುಂದೆ ಕೂತು ಆಟವಾಡುವುದು, ಸೋಶಿಯಲ್ ನೆಟ್ವರ್ಕಿಂಗ್ ಅಲ್ಲಿ ಮಾತುಕತೆ. ಎಷ್ಟೊಂದು ವ್ಯತ್ಯಾಸ ಕಾಣುತ್ತದೆ. ನಮಗೆ ಇದರ ಅನುಭವವಾಗುವಾಗ ಇನ್ನು ನಮ್ಮ ತಂದೆ ತಾಯಿಯರಿಗೆ ಇನ್ನು ಬಹು ದೊಡ್ಡ ವ್ಯತ್ಯಾಸ ತಿಳಿಯಬಹುದು.
ಖರ್ಚಿನ ಮಾತು ಬಂದರೆ, ೨-೩ ವರ್ಷಗಳ ಹಿಂದೆ ತಿಂಗಳಿಗೆ ೫೦-೧೦೦ ಖಾಲಿ ಮಾಡಿದರೆ ಅದೇ ದೊಡ್ಡದು ಅನ್ನಿಸುತ್ತಿತ್ತು..ಈಗ ದಿನಕ್ಕೆ ೧೦೦ ರೂಪಾಯಿ ಎಲ್ಲಿಗೋ ಸಾಲಲ್ಲವೆಂಬ ಭಾವ. ಕೈಯಲ್ಲಿ ಭಾರಿ ನೋಟುಗಳನ್ನು ಎಣಿಸುವ ಕಾಲ ನಮ್ಮದು. ಆದರೆ ಅದೂ ಸಾಲದು ಎಂಬ ಕೊರಗು ಬೇರೆ. ಅದು ನಮಗೆ ನಾವೇ ಕಟ್ಟಿಕೊಂಡ ಅ-ಸೀಮಿತದ ಗಡಿಯೇ ? ಸಂತೋಷದ ಹುಡುಕಾಟದಲ್ಲಿ , ಹಣ ಕೂಡಿಡುವ ನಿರ್ಣಯದಲ್ಲಿ ನಮ್ಮ ಜೀವನದ ಅಮೂಲ್ಯವಾದ ಕ್ಷಣಗಳನ್ನು ಆಫೀಸಿನಲ್ಲಿ ಕಳೆಯುತ್ತಿದ್ದೇವೇನೋ ಅನಿಸುತ್ತದೆ.
ಸುಖ ಶಾಂತಿ ತುಂಬಿದ ಜಾಗಕ್ಕೆ ಹಣ ಖರ್ಚು ಮಾಡಿ ಹೋಗುವ ನಿರ್ಧಾರ. ನಮ್ಮಲ್ಲಿ ಖುಷಿಯನ್ನು ಕಳೆದುಕೊಂಡು ಅದರ ಹುಡುಕಾಟಕ್ಕೆ ಹಣ ಖರ್ಚು ಮಾಡಿ ದೂರದೂರುಗಳಿಗೆ ನಮ್ಮ ಪಯಣ. ಪ್ರವಾಸದ ನಂತರ ಮತ್ತದೇ ದಿನಚರಿಗೆ ನಮ್ಮನ್ನು ಪ್ರೇರೇಪಿಸುವುದು. ಇದು ನಮ್ಮೆಲ್ಲರ ಜೀವನದ ಕ್ರಮವಾಗಿದೆ.
ಪ್ರತಿ ವಾರವೂ ಶಾಪಿಂಗ್ ಎಂಬ ನೆಪದಲ್ಲಿ ವಸ್ತ್ರ ಖರೀದಿ . ಹಬ್ಬಕ್ಕೊಂದು ಹೊಸ ಬಟ್ಟೆ ಕೊಳ್ಳುವ , ಹಬ್ಬ ಬರುವವರೆಗೆ ಕಾಯುವುದುದರಲ್ಲಿ ಒಳ್ಳೆಯ ಮಜಾ ಇತ್ತು. ಈಗ ಬೇಕೆನ್ನುವಾಗ ಮಾಲ್, ದೊಡ್ಡ ದೊಡ್ಡ ಅಂಗಡಿಗಳಿಗೆ ಲಗ್ಗೆ ಇಟ್ಟು ಕೊಳ್ಳುವುದು. ದಿನವೂ ಹಬ್ಬದಂತೆ.
ನಿಜವಾಗಿಯೂ ಕಾಲ ಬದಲಾಗಿದೆಯೇ ಅಥವಾ ನಾವು ಕಾಲವನ್ನು ಬದಲಾವಣೆ ಮಾಡಿದೆವಾ ? ಇದನ್ನೆಲ್ಲಾ ಯೋಚನೆ ಮಾಡುವುದರೊಳಗೆ ಸಂಜೆ ಆಗಿ ಸೂರ್ಯ ಮನೆಗೆ ಹೊರಟು ನಮ್ಮನ್ನು ಮನೆಗೆ ತೆರಳಿಸುವುದರಲ್ಲಿ ಇದ್ದ.. ಇಷ್ಟೆಲ್ಲಾ ವಿಚಾರ ವಿನಮಯ ಮಾಡಿಕೊಂಡು , ಅಯ್ಯೋ ನಾಳೆ ಮತ್ತೆ ಆಫೀಸ್ ಎಂದು ಚಪ್ಪೆ ಮೋರೆ ಹೊತ್ತು ಕಾಲಕ್ಕೆ ತಕ್ಕಂತೆ ನಾವು ಎಂದು ಗೊಣಗಿಕೊಳ್ಳುತ್ತ ನಾಳೆಯ ಸಿದ್ದತೆಗೆ ಮನಸ್ಸನ್ನು ಸಜ್ಜುಗೊಳಿಸಲು
ಪ್ರಾರಂಭಿಸೆದೆವು..
ಅಂದೊಂದಿತ್ತು ಕಾಲ.. ಎಂಬ ಹಾಡಿನ ಸಾಲುಗಳು ಗಾಳಿಯಲ್ಲಿ ತೇಲಿ ಹೋದಂತ ಅನುಭವ..