ಶುಕ್ರವಾರ, ನವೆಂಬರ್ 29, 2013

ಯಾಕಪ್ಪ ಹೀಗೆ ???


===============================================================
                                                                   ಚಿತ್ರ ಕೃಪೆ - ಗೂಗಲ್ 





ಮನೆಯೇ ಮೊದಲ ಪಾಠಶಾಲೆ , ತಾಯಿ ತಾನೇ ಮೊದಲ ಗುರು", "ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ", "ಮಾತೃ ದೇವೋ ಭವ "  ಇಂತೆಲ್ಲ ಗಾದೆ ಮಾತುಗಳು ಹೆಣ್ಣಿಗೆ ಉತ್ತಮ ಸ್ಥಾನ ನೀಡಿ ಗೌರವಿಸಿದರೆ, ಜೀವವಿರುವ ನಾರಾ ಮನುಷ್ಯರೇ ಗೌರವ ನೇಡದಿರುತ್ತಿರುವುದು ಒಂದು ಹೆಣ್ಣಾಗಿ ಯೋಚಿಸಬೇಕಾಗಿದೆ. 

ದಿನ ಬೆಳಗಾದರೆ ಎಲ್ಲೋ ಅತ್ಯಾಚಾರ, ಸೀಮೆ ಎಣ್ಣೆ ಸುರಿದು ಕೊಲೆ ಯತ್ನ , ದಾರಿಯಲ್ಲಿ ಹೋಗುತ್ತಿದ್ದ ಮಹಿಳೆಯ ಸರ ಅಪಹರಣ , ವರದಕ್ಷಿಣೆ ತರಲಿಲ್ಲವೆಂದು ಕಿರುಕುಳ ಕೊಟ್ಟರು ಎಂದೆಲ್ಲ ಅ-ಸಹನೀಯ, ಅ-ಸಹಜ ಘಟನೆಗಳು ಭಯ ಹುಟ್ಟಿಸುತ್ತವೆ. ಯಾಕೆ ಅಷ್ಟು ದುರ್ಬಳಲೇ ಹೆಣ್ಣು ? ಕ್ಷಮಯಾ  ಧರಿತ್ರಿ ,  ಸಹನೆ ಕರುಣ ಮೂರ್ತಿ , ಪ್ರೀತಿ ವಾತ್ಸಲ್ಯದ ಕುಡಿ  ಇವೆಲ್ಲ ಪುಸ್ತಕ ಭಾಷಣದಲ್ಲಿ ಹೇಳುವ, ಕೇಳುವ  ಉದ್ಗಾರವಾಚಕದಂತೆ ತೋರುತ್ತವೆ.ಇತ್ತೀಚಿನ ದಿನಗಳಲಿ ಆಗುತ್ತಿರುವ ಹೆಣ್ಣಿನ ಮೇಲಿನ ದೌರ್ಜನ್ಯ ಯಾವುದೇ ಸುರಕ್ಷತೆಯಿಲ್ಲದೆ ನಡೆಯುತ್ತಿರುವ ಉತ್ತರ ಸಿಗದ  ದುಃಖಕರ ಘಟನೆಯಾಗಿದೆ. ಎಲ್ಲಾ ರೀತಿಯ ಹೋರಾಟ, ಸಮಾನ ಹಕ್ಕು ಎಂಬಿತ್ಯಾದಿ ಹೆಣ್ಣಿನ ಮೌಲ್ಯಕ್ಕೆ ಗೌರವ ಸೂಚಿಸುವ ಕಾರ್ಯಗಳು ಅತ್ಯಾಚಾರ, ದೌರ್ಜ್ಯನವನ್ನು ತಡೆ ಹಕ್ಕಲು ಅಡಿಪಾಯವಾಗುತ್ತಿದೆಯೇ ಎಂಬ ಸಂದೇಹ  ಒಂದೆಡೆಯಾದರೆ ಸುಭದ್ರತೆಗೆ ಬೆಲೆಯೇ ಇಲ್ಲ ಎಂಬಂತೆ ಒಂದರ ಮೇಲೊಂದರಂತೆ ನಡೆಯುತ್ತಿರುವ ಸಂಜ ಘಾತುಕ ಘಟನೆಗಳು ಮೈ ನವಿರೇಳಿಸುವ ಕೆಲಸ ಮಾಡುತ್ತಿದೆ. ಇದಕ್ಕೆಲ್ಲ ಪೂರ್ಣ ವಿರಾಮ ಇದೆಯೇ? 
ಹೆಣ್ಣಿಗೋ ಪುರುಷನಂತೆ ದುಡಿಯುವ ಹಕ್ಕಿದೆ, ಸಾಮರ್ಥ್ಯವಿದೆ, ಬುದ್ಧಿಮತ್ತೆ ಇದೆ, ಆಲೋಚನಾ ಶಕ್ತಿ ಇದೆ, ಸಂಸಾರ ಸಂಭಾಳಿಸುವ ಭಾವನಾತ್ಮಕ ಭಾವನೆಗಳು ಸಮ್ಮಿಳಿತವಾಗಿದೆ , ಎಲ್ಲರೊಂದಿಗೆ ಒಡನಾಡಿ ಕುಟುಂಬದ ಒಳಿತು ಕಾಪಾಡುವ ಕ್ರಿಯಾಶೀಲತೆ ಇದೆ, ಮಕ್ಕಳಿಗೆ ಒಳ್ಳೆ ರೀತಿಯಲ್ಲಿ ಜೀವನದ ಮಾರ್ಗ ತೋರಿಸುವ ಪ್ರಭುದ್ದತೆ ಇದೆ.. ಇಷ್ಟು ಸಾಕಲ್ಲವೇ   ಒಂದು  ಹೆಣ್ಣನ್ನು ಒಳ್ಳೆಯ ದೃಷ್ಟಿ ಕೋನದಿಂದ ನೋಡಲು. ಆದರೂ ಸಮಾಜದ ದೃಷ್ಟಿಕೋನ ಮಾತ್ರ ಹಳೆ ಕಾಲದಲ್ಲಿ ನಾಲ್ಕು ಗೋಡೆಯಲ್ಲಿ ಇರುವ ಮಹಿಳೆಯಂತೆ ಕಾಣುವ ಪರಿ ಇನ್ನೂ ಸರಿಯಾಗಿಲ್ಲ. ಆಧುನಿಕತೆ ಮಾದಕತೆಯಲ್ಲಿ ಇಂದಿನ ಯುವ ಪೀಳಿಗೆ ದಾರಿ ತಪ್ಪುತ್ತಿದ್ದರೂ , ಭಾರತ ದೇಶದಲ್ಲಿ ಹುಟ್ಟಿ ಒಳ್ಳೆ ಸಂಸ್ಕ್ರತಿಯ ಮಡಿಲಲ್ಲಿ ಬೆಳೆದ ಮಕ್ಕಳ ಸಂಖ್ಯೆಗಂತೂ ಕಡಿಮೆಯಿಲ್ಲ . 

ಸಮಾಜದಲ್ಲಿ ಭ್ರಷ್ಟಾಚಾರ, ಹಣದ ನಡುವಿನ ಆಟ ಜಾಸ್ತಿ ಆಗಿದೆ. ಸಾಮಾನ್ಯ ಮನುಷ್ಯ ಒಳ್ಳೆ ರೀತಿಯಲ್ಲಿ ಜೀವನ ನಡೆಸುವುದು, ಹೆಣ್ಣಿಗೆ ಒಳ್ಳೆಯ ಸ್ಥಾನ ಮಾನ ನೀಡುವಂತೆ  ಸಮಾಜ ಬದಲಾಗುವುದು ಕೈಗಟುಕದ ದ್ರಾಕ್ಷಿಯಂತಾಗುವುದೇ ?

ದಾರಿಯಲ್ಲಿ ಓಡಾಡುವಾಗ ಯಾವ ಘಾತುಕ ಬಂದು ಸರ ಅಪಹರಿಸುವುನೋ , ಕೈಯಲ್ಲಿರುವ ಹಣದ ಪರ್ಸ್ ಮಾಯವಾಗುವುದೋ, ಮನೆಗೆ ಬಂದು ಕಳ್ಳತನ ಮಾಡುವರೋ ಎಂಬ ಭಯ, ಹೆದರಿಕೆಯಲ್ಲಿ ಬೆಂಗಳೂರು ಎಂಬ ಬೀಡಿನಲ್ಲಿ ವಾಸಿಸುತ್ತಿರುವ ಒಂದು ಹೆಣ್ಣಿನ ಕೊರಗು !! 



             

ಗುರುವಾರ, ಅಕ್ಟೋಬರ್ 31, 2013

ದೀಪ ಸಾಲುಗಳ ಹಬ್ಬದ ಸಂತೋಷಕ್ಕೆ ಎದುರುಗೊಳ್ಳುತ್ತ



ಈ ಬಾರಿ ದೀಪಾವಳಿ , ೪ ರಜೆಯೊಟ್ಟಿಗೆ ಬಂದಿದೆ. ಸಂತೋಷ್ ಸಂಭ್ರಮ ಎಲ್ಲೆಡೆ ಪಸರಿಸಿ ದೀಪದ ಅಂದದಿಂದ ಸಿಂಗಾರಗೊಳ್ಳಲು ಕಾತರಿಸಿದೆ. ಹಣತೆ ತುಂಬಾ ಎಣ್ಣೆ ತುಂಬಿ, ನೆಣೆ (ಬತ್ತಿ)ಇಂದ ಬೆಳಕು ಹರಡಲು ಎಲ್ಲೆಡೆ ಹಣತೆಯ ಮಾರಾಟ. ಮನೆಯ ಆವರಣದ ಸುತ್ತ ಬಗೆ ಬಗೆಯ ಆಕಾರದಿಂದ ಹಣತೆ ಇಟ್ಟು ದೀಪದ ಚಿತ್ರ ಬಿಡಿಸಲು ನಾವೆಲ್ಲಾ ಸಜ್ಜಾಗುತ್ತಿದ್ದ ಪರಿ ದೀಪಾವಳಿ ಹಬ್ಬಕ್ಕೆ ನಾಂದಿ ಹಾಡುತ್ತಿದೆ. ಅಪ್ಪ ಯಾವಾಗ ಪಟಾಕಿ ಡಬ್ಬ ತರುತ್ತಾರೋ ಎಂದು ತದೇಕ ಚಿತ್ತದಿಂದ ಬಾಗಿಲ ಬಳಿ ಕಾಯುವ ಆ ನಮ್ಮ ಬುದ್ಧಿಗೆ ತಮಾಷೆ ಮಾಡುವ ಅಂತ ಅನಿಸುತ್ತಿದೆ  ವಾಲೆ ಪಟಾಕಿ(ತುದಿಯಲ್ಲಿ ಬತ್ತಿ ಇದ್ದು ಅದನ್ನು ಹಿಡಿಯಲು ಉದ್ದದ ಹಿಡಿಕೆ) ಇಂದ ಸುರ್ಚಂದ್ರ ಕಡ್ಡಿ (ನಕ್ಷತ್ರ ಕಡ್ಡಿ) , ಆನೆ ಪಟಾಕಿ , ದಢಾಕಿ ಸರ ಎಲ್ಲವನ್ನು ಸಿಡಿಸಿ ವಾತಾವರಣವನ್ನು ಕಲುಶಿತಗೊಳಿಸುತ್ತಿದದ್ದು ಈಗ ಬೇಸರ ತರಿಸುತ್ತದೆ  ಆದರೆ ಅದರಿಂದ ಒಟ್ಟುಗೂಡಿ ಖುಷಿಯಿಂದ ಪಟಾಕಿ ಸಿಡಿಸುತ್ತಿದ್ದ ರೀತಿ ದೀಪಾವಳಿಯ ಹಬ್ಬಕ್ಕೆ ಮೆರುಗು ಕೊಡುತ್ತಿತ್ತು. 

ಹಂಡೆಗೆ ನೀರು ತುಂಬಿಸುವುದು ,ಬಲೀಂದ್ರನಿಗೆ ಮೀಸೆ ಬರೆಯುವುದು,ಎಣ್ಣೆ ಸ್ನಾನ , ಚಿಕ್ಕಪ್ಪನ ಅಂಗಡಿ ಪೂಜೆ(ಅದಕ್ಕಿಂತ ಮೊದಲು ಅಂಗಡಿ ಸ್ವಚ್ಛಗೊಳಿಸುವುದು), ಕರ್ಕಿಯ ಪರಿಚಯದವರ ಎಲ್ಲರ ಅಂಗಡಿ ಪೂಜೆ ಮುಗಿಸಿ ಮನೆ ಸೇರುವಾಗ ಎನೋ ಸಮಾಧಾನ, ಸಂತೋಷ. ಹೊಸ ಅಂಗಿ ತೊಟ್ಟು ಖುಷಿಯಿಂದ ಕುಪ್ಪಳಿಸುತ್ತಿದ್ದ ಕ್ಷಣಗಳು ಈಗಿನ ಕಾಲದಲ್ಲಿ ದಿನ ಹೊಸ ಅಂಗಿ ಖರೀದಿಸಿ ಖುಷಿ ಪಡುವ ಕ್ಷಣಕ್ಕಿಂತ ಭಿನ್ನವಾಗಿತ್ತು.. ಹಬ್ಬ ಬಂತೆಂದರೆ ಹೊಸ ಬಟ್ಟೆ , ಎಲ್ಲ ಬಂಧು ಬಾಂಧವರ ಮಿಲನ.

ಇಷ್ಟೆಲ್ಲಾ ಖುಷಿ ಸಂತೋಷದ ದೀಪಾವಳಿ ಹಬ್ಬದ ದೀಪಗಳು ಸಾರುವ ಜ್ಞಾನ , ಅಂಧಕಾರವನ್ನು ಓಡಿಸುವ ಬೆಳಕನ್ನು ಪಸರಿಸುವ ಹಬ್ಬಕ್ಕೆ ನಾವು ನೀವೆಲ್ಲ ಸನ್ನದ್ಧರಾಗಿ ಸುರಕ್ಷತೆ ಪೂರಕವಾಗಿ ಹಬ್ಬವನ್ನು ಆಚರಿಸೋಣ 

(ಒಂದು ದಿನ ಮುಂಚಿತವಾಗಿ )ದೀಪಾವಳಿ ಹಬ್ಬದ ಶುಭಾಶಯಗಳು 


ಚಿತ್ರ ಕೃಪೆ : ಗೂಗಲ್

ಬುಧವಾರ, ಜುಲೈ 3, 2013

ಮನಸಲ್ಲಿ ಮೂಡಿದ ಕಾಲ್ಪನಿಕ ರೇಖೆಗಳು



ತುಮುಲ 
---------------------------------------------------
ಭಾರವಾಗಿದೆ ಮನಸ್ಸು ದಿಕ್ಕು ದೆಸೆ ಕಾಣದೆ 
ಸಂತಸ ತುಂಬಿದ ಮನಸ್ಸು ಶಾಂತಿಯ ನೆಲೆ ಅರಸಿದೆ
ಆ ಪರಿಯಲಿ ಈ ಪರಿಯಲಿ ಸಂತಾಪ ಬಯಸಿದೆ
ಸರ್ರನೆ ಮನ ಕರಗಿ ಬಿಡಲಿ ಎಂದು ಹಂಬಲಿಸಿದೆ

ಹೊಗೆಯೊಳಗೆ ಜೀವ
----------------------------------------------------
ಎಲ್ಲೆಲ್ಲೂ ಕಂಡಿತು ಹೊಗೆಯ ಛಾಯೆ
ಏಕೇ ಮಾನವ ನಿನಗೆ ಬೇಕು ಸಿಗರೇಟಿನ ಮಾಲೆ
ಮುಚ್ಚಿಕೊಂಡಿತು ದಾರಿಹೋಕನ ಮೂಗಿನ ಹೊಳ್ಳೆ
ಅದ ನೋಡಿ ಕಾಣಲಿಲ್ಲವೇ ಒಂಚಿತ್ತೂ ಅಸಡ್ಡೆಯ ಗೆರೆ

ಬಾಳ-ಗಾಡಿ
----------------------------------------------------
ರಭಸದಿ ಬೀಸುತಿದೆ ಗಾಳಿ
ಎಲ್ಲಿಂದೆಲ್ಲಿಗೋ ಓಲಾಡುತಿದೆ ಬಾಳ ಗಾಡಿ
ಸವಾರನಲ್ಲವೇ ನಾನು ಬದುಕಾ ಜಟಕಾಬಂಡಿಯಲಿ
ಸಾಗಬೇಕಾಗಿದೆ ದಾರಿ ಮನಸ ತುಮುಲದಲಿ

( ತುಮುಲ ಶಬ್ದದ ಬಳಕೆ -ನಿನ್ನೆ ಓದಿ ಮುಗಿಸಿದ "ತುಮುಲ" ಎಂಬ ಸುಧಾ ಮೂರ್ತಿ ರಚಿತ ಕಾದಂಬರಿಯ ಹೆಸರಿನಿಂದ ಪ್ರೇರಿತ )

ಶುಕ್ರವಾರ, ಜೂನ್ 21, 2013

ಮದುವೆಯ ನಂತರ....



ಮದುವೆ ಎಂಬುದು ಹಿರಿಯರು ಒಡಗೂಡಿ ನಿರ್ಧರಿಸುವ ಜೀವನದ ಅತ್ಯಂತ ಮಹತ್ತರ ಘಟ್ಟ. ಅದನ್ನು ಒಪ್ಪಿಗೊಳ್ಳುವಾಗ ಮನಸ್ಸು ಪ್ರಬುದ್ಧತೆಯ ಮೆಟ್ಟಿಲು ಹತ್ತಿರುವುದೋ ತಿಳಿಯದು. ಯಾವುದೇ ಆಗಲಿ ಮನುಷ್ಯರ ದೃಷ್ಟಿಕೋನಕ್ಕೆ ಅನುಗುಣವಾಗಿ ಒಂದು ವಸ್ತುವಿನ ಗುಣ ಅವಗುಣಗಳ ವಿವರಣೆ. 


ನನ್ನ ಪ್ರಕಾರ ಮದುವೆ ಎಂಬುದು ಎರಡು ಮನಸ್ಸಿನ ಮಿಲನಕ್ಕೆ ಹಾಕಿ ಕೊಡುವ ಸಂಖ. ಎರಡು ಕುಟುಂಬಗಳ ಸಂಬಂಧ ವಿಸ್ತರಣೆ.  ಬಂಧು ಬಾಂಧವರ ಮಿಲನ ಕೂಟ. ಬಹು ಸುಂದರ ಖುಷಿ, ದುಃಖ  ಕ್ಷಣಗಳ ಸಮ್ಮಿಶ್ರಣ. 

ಹಿರಿಯರು ಕೂಡಿ  ನಿರ್ಧರಿಸಿದ  ಮದುವೆಯಲ್ಲಿ  ಹೆಣ್ಣಿಗೆ ಹಾಗೂ ಗಂಡಿಗೆ ವಿಧಿಯಿಲ್ಲದೆ ಒಪ್ಪಿಕೊಳ್ಳುವ ಪ್ರಸಂಗ ಒದಗಿ ಬರುವುದು ಕಡಿಮೆ. ಅದೊಂದು ರೀತಿಯ ವಿವರಿಸಲಾಗದ ಸಂತಸದ ವಿಶ್ಲೇಷಣೆಗಳು. ಹೇಗಿರುವನೋ, ಏನನ್ನು ಇಷ್ಟ ಪಡುವನೋ, ಹೀಗೆ ಮೊದಲಾದ ಪ್ರಶ್ನೆಗಳಿಗೆ ಎಡೆ ಮಾಡಿಕೊಡುವ ಕುತೂಹಲದ ಘಟ್ಟ.. ಎಲ್ಲ ಶಾಸ್ತ್ರ ನಿಯಮದ ಪ್ರಕಾರ ಒಪ್ಪಿಗೆ ಸೂಚಿಸಿ ನಿಶ್ಚಿತಾರ್ಥ ಮದುವೆ ಬಗ್ಗೆ ಸಿದ್ಧತೆ. ಅವರ್ಣನೀಯ ಕ್ಷಣಗಳ ಮುಖತಃ ಭೇಟಿ. 

ಹುಟ್ಟಿಸಿದ ಬೆಳೆಸಿದ ಪೊರೆದ ಎಲ್ಲರನ್ನು ಬಿಟ್ಟು ಗಂಡನೊಟ್ಟಿಗೆ  ಹೊರಡುವಾಗ  ಅಶ್ರುಧಾರೆಯ ತರ್ಪಣ ತನ್ನಿಂತಾನೆ ಆಗುವುದು ದಿಟ. ಕ್ಷಣ ಮಾತ್ರದಲ್ಲಿ  ಅತ್ತೆ ಮಾವರ ಮಾವ ಗಂಡನ  ಸಾಂತ್ವಾನ ಕಣ್ಣೀರು ಒರೆಸಿಕ್ಕೊಳ್ಳಲು ಒರೆಸಿಕೊಳ್ಳಲು  ಸಹಾಯ ಮಾಡುತ್ತದೆ ದುಗುಡ ತುಂಬಿಕೊಂಡಿದ್ದರೂ ತುಂಬಿ ಕೊಂಡಿದ್ದರೂ ಅಲ್ಪ ಸಮಯದ ಸಾಂತ್ವನ ಮನಸನ್ನು ಸಮಾಧಾನ ಮಾಡುತ್ತದೆ. 

ಹೊಸ ಜೀವನ ಶುರು. ಹುಡುಗಿ ಸಹ ಕೆಲಸ ಮಾಡುತ್ತಿದ್ದರೆ , ಇಬ್ಬರಲ್ಲಿಯೂ ಹೊಂದಾಣಿಕೆಯ ಮನೋಭಾವ ಇದ್ದರೆ ಖುಷಿ ಸಂತೃಪ್ತಿಯ ಜೀವನ ಖಂಡಿತ .. ಒಬ್ಬಲ್ಲ ಒಬ್ಬರು ಒಂದಲ್ಲ ಒಂದು ವಿಷಯದಲ್ಲಿ   ಅರ್ಥ ಮಾಡಿಕೊಂಡರೆ ಸುಖೀ ಜೀವನದ ಹಾದಿ ಸುಲಭ ಸಾಧ್ಯ. ನನ್ನ ಪ್ರಕಾರ ವಿಶಾಲ ಮನೋಭಾವದಿಂದ ಎಲ್ಲವನ್ನು ಅರ್ಥ ಮಾಡಿಕೊಂಡರೆ ಬಹು ಕಷ್ಟ ಸಮಯದಲೂ ಬಹು ಸರಳ ವಿಧಾನದಿಂದ ವ್ಯವಹರಿಸಬಹುದು.  ಯಾವುದೇ ಹೊಸ ಕೆಲಸ\ವಿಷಯ ಆಗಲಿ ಪ್ರಾರಂಭದಲ್ಲಿ ಕಷ್ಟ ಅನಿಸಿದರೂ  ಇದು ಜೀವನದ ಸಣ್ಣ ಪ್ರಮಾಣದ ಕಷ್ಟ ಎಂದೆನಿಸಿ ಮುಂದುವರೆದರೆ ಮಾದರಿ ಜೀವನಕ್ಕೆ ಸಿದ್ಧ. 

ಅಮ್ಮ ಚಪಾತಿಗೆ ಪಲ್ಯ ಅಥವಾ ಸಾಗು ಮಾಡದಿದ್ದರೆ ಕಿಡಿ ಕಾರುತ್ತಿದ್ದ ನಾನು ಈಗ ನಾನೇ ಎಲ್ಲವನ್ನು ಮಾಡಿ ಮುಗಿಸುವಾಗ ಅಮ್ಮನ ಬಗ್ಗೆ ಪ್ರೀತಿಯ ಭಾವ ತುಂಬಿ ಬಂದು ಕಣ್ಣನ್ನು ತೇವ ಮಾಡುತ್ತದೆ. :)

ಹೊಸ ಜೀವನದ ಮೆಟ್ಟಿಲುಗಳನ್ನು ಅಲ್ಲಲ್ಲಿ ಎಡವಿ, ಕೊಡವಿಕೊಂಡು ಹೋಗುತ್ತಿರುವ ನಾವು ಸುಖ ಸಂತೋಷದ ಮಾದರಿ ಜೀವನದ ಕ(ನ)ನಸಿನೊಂದಿಗೆ :)

     

         

ಶುಕ್ರವಾರ, ಮೇ 17, 2013

ಇದುವೆಯೇ ಬಾಳ ಗುಟ್ಟು ?

ಕಳೆದು ಹೋದ ಸಂತಸ ನಾನಿಂದು 
ಕಂಡೆ ನಿನ್ನ ನಗುವ ಕಂಡು 
ಬರಸೆಳೆದ ಭಾವದಲ್ಲಿ ಮಿಂದು 
ಬಾಳ ಸವಿಯ ಉಂಡು

ಇರಬೇಕು ಹಾಲು ಜೇನಿನಂತೆ ಎಂದು 
ಅಪ್ಪ ಅಮ್ಮರ ಜೀವನ ಕಂಡು 
ಜಗಳ ಮನಸ್ತಾಪ ಮಾಮುಲೆಂದು 
ಪ್ರೀತಿ ವಿಶ್ವಾಸ ಕೊನೆತನಕದ ಬಂಧುಗಳು ಎರಡು

ಆ ಹತ್ತು ದಿನಗಳು

ಆ ದಿನ ಸೋಮವಾರ. ಸಂಜೆ ಎಂದಿನಂತೆ ಆಫೀಸ್ ಮುಗಿಸಿ ಮನೆಗೆ ಬಂದು ಅಮ್ಮ ಕಳುಹಿಸಿಕೊಟ್ಟ  ಹಲಸಿನಕಾಯಿ ಚಿಪ್ಸ್ ತಿನ್ನುತ್ತಾ , ತುಂಬಾ ಸಮಯದ ಬಳಿಕ ಬಂಧು ಬಾಂಧವರಿಗೆ  ಫೋನಾಯಿಸಿ  ಸಮಯ ಕಳೆಯುತ್ತಿದ್ದೆ. ಬಹು ವರ್ಷದ ನಂತರ ಹಲಸಿನಕಾಯಿ ಚಿಪ್ಸ್ ತಿನ್ನುವ ಭಾಗ್ಯ ಗಂಡನಿಗೆ ದೊರೆಯುತ್ತೆ ಅಂತ ಖುಷಿಯಿಂದ ಇದ್ದೆ. ಸ್ವಲ್ಪ ಸಮಯದ ತರುವಾಯ ಪತಿದೇವರ ಆಗಮನ. ಮುಖದಲ್ಲಿ ಯಾವತ್ತಿನ ಉತ್ಸುಕತೆ ಇರಲಿಲ್ಲ. ನಿಮಗೊಂದು ಖುಷಿಯ ವಸ್ತು ವಿಷಯ   ಇದೆ ಎಂದು ಹೇಳಿದರೂ ಯಾವುದೇ ಪ್ರತಿಕ್ರಿಯೆ ಬರದೆ ದಾರಿಯ ಧೂಳು ತೊಳೆದುಕೊಳ್ಳಲು ಹೊರಟರು.. ನಾನು ಅಡುಗೆ ಮನೆ ಹೊಕ್ಕು ರಾತ್ರಿ ಊಟಕ್ಕೆ ಅಣಿ ಮಾಡತೊಡಗಿದೆ.. ನನ್ನ ಕೆಲಸದಲ್ಲಿ ತೊಡಗಿದ್ದೆ.. ಘಂಟೆ ೯ ಆಯಿತು.. ಮನೆಯಲ್ಲಿ  ನೀರವ ಮೌನ. ಏನಾಗಿದೆ ಎಂದು ಹುಡುಕ ಹೊರಟಿದರೆ ಗಂಡ ಸುಮ್ಮನೆ ಚಾದರ  ಹೊದ್ದು  ಮಲಗಿದಾರೆ. ಒಮ್ಮೆ ಎದೆ ಧಸಕ್ಕೆಂದಿತು ..ಯಾವತ್ತೋ ಉತ್ಸಾಹದ ಬುಗ್ಗೆಯಂತಿದ್ದೊರು  ಹೀಗೇಕೆ ಆದರು ಎಂಬ ಬೇಜಾರು. ಮೈ ತುಂಬಾನೆ ಸುಡುತ್ತಿತ್ತು .. ಮಾಮೂಲು ಜ್ವರ ಉಂಡು ಮಲಗಿದರೆ ಸರಿಯಾಗುತ್ತೆ ಅಂತ ಊಟ ಮುಗಿಸಿದೆವು.. 

ಮರುದಿನ ಜ್ವರ ಒಂಚಿತ್ತು ಕಡಿಮೆಯಾಗಲಿಲ್ಲ..ಒಲ್ಲದ ಮನಸ್ಸಿನಿಂದ ಆಫೀಸಿಗೆ ಹೊದೆ.. ಬಳಿಕೆ ಮಧ್ಯಾನದ ವೇಳೆಗೆ  ಜ್ವರದ  ತಪಾಸಣೆಗೆ ಆಸ್ಪತ್ರೆಗೆ ಹೊರಟೆವು.. ಮೈ ತಾಪ ಕ್ಷಣೆ ಕ್ಷಣೆ ಏರುತ್ತಿತ್ತು.. ಗುಳಿಗೆ ಕಡಿಮೆ ಮಾಡುತ್ತದೆ ಎಂದು ಒಂದೆರಡು ಎಮ್ಮೆಗೆ ಕೊಡುವಂತಹ ಗಾತ್ರದ ಗುಳಿಗೆ ಬರೆದುಕೊಟ್ಟರು. ಅದರ ಮರುದಿನ ಮೈ ಮೇಲೆ  ನೀರು ಗುಳ್ಳೆಯ ಗಾತ್ರದ ಕೆಂಪು ಬಣ್ಣದ ಬೊಕ್ಕೆ ಕಾಣಿಸಲಾರಂಭಿಸಿತು. ಡಾಕ್ಟರ ಅದನ್ನು ಚಿಕನ್ ಪಾಕ್ಸ್ ಎಂಧು ಧ್ರಢಿಕರಿಸಿದರು. ಒಮ್ಮೆಲೇ ಮನಸ್ಸು ದುಃಖಿತ ಗೊಂಡಿತು. ಸಿಡುಬು ಎಂದು ಖಚಿತವಾದ ಮರುಕ್ಷಣದಿಂದಲೇ ಪಥ್ಯ ಶುರುವಾಯಿತು.. ಒಂಚಿತ್ತೂ ಉಪ್ಪು ಹುಳಿ ಖಾರವಿಲ್ಲದ ಸಪ್ಪೆ ಊಟ.. ಆಪತ್ತಿನ ಮರದ ಚಕ್ಕೆಯ ಕಷಾಯ.. ಜ್ವರ ಒಂದೆರಡು ದಿನದಲ್ಲಿ ಕಡಿಮೆ ಆಯಿತು.. ಬೋಕ್ಕೆಯ ಸಂಖ್ಯೆ ಜಾಸ್ತಿ ಆಯಿತು.. ಈ ಸಾಂಕ್ರಾಮಿಕ ರೋಗಕ್ಕೆ ಒಮ್ಮೆಯೂ ತುತಾಗದ ನಾನು ಇದಕ್ಕೆ ಕಾರಣವೇನು, ಇದು ಹೇಗೆ ಹರಡುತ್ತೆ ಎಂಬಿತ್ಯಾದಿ ವಿಷಯದ ಕುರಿತು  ಇಂಟರ್ನೆಟ್ ಮೊರೆ ಹೋದೆ. ಚಿಕನ್ ಪಾಕ್ಸ್ ಎಂಬ ಹೆಸರಿಗೆ  ಪುರಾವೆಗಳಿಲ್ಲ. ಆದರೂ    ಬಹಳಷ್ಟು ಜನ ಸಾವನ್ನಪ್ಪಿದ ಸೂಚ್ಯಂಕ ದೊರೆಯುತ್ತವೆ.. ಆದರೆ ಮೆಡಿಕಲ್ ಸೈನ್ಸ್  ಕಾರಣ , ಸಿಡುಬಿಗೆ ಕಾರಣೀಭೂತ ವೈರುಸ್   - ವರಿಸೆಲ್ಲ ಜೊಸ್ಟರ್ನ ಗೆ  ಕಂಡು ಹಿಡಿದಿದ್ದಾರೆ .. ಆದರೂ ಹತ್ತು ದಿನಗಳ ವಿಶ್ರಾಂತಿ ಅವಶ್ಯಕ. ಮನುಷ್ಯನಲ್ಲಿ ಇಮ್ಯೂನ್  ಸಿಸ್ಟಮ್ ಡಾಮಾಜ್ ಆದರೆ, ಈ     ರೋಗಕ್ಕೆ ತುತ್ತಾಗುವ ಸಂಭವ ಜಾಸ್ತಿ. ಒಂದೆರಡು ದಿನದಲ್ಲಿ ಕಡಿಮೆ ಮಾಡುವ ಮದ್ದು ಈ ರೋಗಕ್ಕಿನ್ನು ದೊರಕಿಲ್ಲ ..    ಪಥ್ಯದ ಆಹಾರದ ಜೊತೆ ಡಾಕ್ಟರ ಕೊಟ್ಟ ಔಷಧಿ ಮಾತ್ರ ಸಿಡುಬಿಗೆ ರಾಮಬಾಣ.. ನಂಜಿರುವ  ಯಾವುದೇ ತರಕಾರಿ(ಬದನೆ, ಹಲಸಿನ ಕಾಯಿ , ಬೂದು ಕುಂಬಳಕಾಯಿ ) , ಪದಾರ್ಥ( ಉದ್ದಿನಕಾಳು , ಕಡಲೆಹಿಟ್ಟು , ಪಚ್ಚಬಾಳೆ, ಪುಟಾಣಿ,ಶೇಂಗಾ )  ವ್ಯರ್ಜನೆ ಈ ರೋಗಕ್ಕೆ ಕಟ್ಟುನಿಟ್ಟಿನ ಆಹಾರ ಕ್ರಮದಲ್ಲೊಂದು. ಆ ವೈರಸ್ಸಿನ  ಪ್ರಭಾವ   ಕನಿಷ್ಟ ಹತ್ತು ದಿನ  ಬೊಕ್ಕೆ ಒಣಗುತ್ತ ಬಂದ  ಮೇಲೆ ಜನ ಸಂಪರ್ಕಕ್ಕೆ ಅಡ್ಡಿ ಇಲ್ಲ. ಆ ಹತ್ತು ದಿನದ ಅಂತರದಲ್ಲಿ  ಬೊಕ್ಕೆ ತುರಿಕೆ ಆದರೂ ಅದನ್ನು ತುರಿಸುವಂತಿಲ್ಲ.. ಉಗುರು ತಾಕಿದರೆ ಕಲೆ ಉಳಿಯುವ ಎಚ್ಚರಿಕೆ.. ಒಮ್ಮೆ ಜೋರು ಹಸಿವಾದಂತಾಗಿ ತಿನ್ನಲು ಹೊರಟರೆ ಎಲ್ಲವೂ ಸಪ್ಪೆ.    

ಒಮ್ಮೆಯೂ ಬರದೆ ಇದ್ದ ಕಾರಣಕ್ಕೋ ಎನೋ ನನ್ನ ಗಂಡನ ನಂತರ ನನಗೆ ತಗುಲಿತು ರೋಗ. ಗಂಡ ಪಟ್ಟ ಯಾತನೆ ನೋಡಿ ಮರುಗಿದ್ದ ನಾನು ನನಗೆ ಬಂದದ್ದನ್ನು ಹೇಗೆ ಎದುರಿಸುವುದು ಎಂದು ಯೋಚಿಸುತ್ತ ಹತ್ತು ದಿನ ಕಳೆಯುತ್ತ ಬಂದಿತು . ಮನಸ್ಸಿಗೇನೊ  ನೆಮ್ಮದಿ.. ಆದರೂ ಹತ್ತು ದಿನದಲ್ಲಿ ಬಂದ  ನೋವು , ಪಟ್ಟ  ಯಾತನೆ ಯಾರಿಗೂ ಬರಬಾರದೆಂಬುದು ದೇವರಲ್ಲಿ ಕೋರಿಕೆ.. ಒಮ್ಮೆ ಸಿಡುಬಿಗೆ  ತುತ್ತಾದ ವ್ಯಕ್ತಿ  ಇನ್ನೊಮ್ಮೆ   ತುತ್ತಾಗಲ್ಲವೆಂಬ ನಂಬಿಕೆ.. ಯಾಕಂದರೆ -ಸಿಡುಬು ರೋಗ -ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. 

ಹಲಸಿನ  ಚಿಪ್ಸ್ ತಿನ್ನುವ ಆಸೆ ಹಾಗೆಯೇ ಉಳಿಯಿತು.. :( 

(ವಿಷಯ ಸಂಗ್ರಹಣೆ - ಅಂತರ್ಜಾಲ  ಮತ್ತು ಹಿರಿಯರ ಭೋದನೆ )

ಭಾನುವಾರ, ಏಪ್ರಿಲ್ 21, 2013

-------

ಸೂಚಕ 
----------
ದಾರಿಹೋಕನೊಬ್ಬ 
ಎಸೆದನೊಂದು ಬೀಡಿಯ ತುಂಡು 
ನನ್ನ ಆಯಸ್ಸು ತೀರೀತು 
ನಿನ್ನ ಆಯಸ್ಸಿನೊಂದಿಗೆ ಎಂದು 
ಗಹಗಹಿಸಿ ನಕ್ಕಂತೆ ಭಾಸವಾಯಿತು 
ಬಿದ್ದ ಬೆಂಕಿಯ ಚೂರನ್ನು ಕಂಡು 

ಸಾಮಾನ್ಯ ಜ್ಞಾನ 
-------------------
ಇರಲು ನಿನ್ನೊಂದಿಗೆ ಸದಾ 
ನೀತಿ ನಿಯಮ ಗೌರವ ಸಜ್ಜನಿಕೆ 
ಬೇಕಿಲ್ಲ  ಇನ್ನೇನೂ ನಿನ್ನ 
ಗುಣ ವಿಶೇಷಗಳ ಅಳೆಯುವ ಪ್ರನಾಳಿಕೆ 

ಪ್ರೀತಿ 
--------
 ಸಂಧ್ಯಾ ರಶ್ಮಿಯ ಪ್ರಕರತೆ 
 ಕೆಂಪು ಮುಗಿಲ ಒಯ್ಯಾರ 
 ತಣ್ಣನೆಯ ಗಾಳಿಗೆ 
 ಹಸಿರು ಎಲೆಗಳ ಒಯ್ದಾಟ 
 ಕಟ್ಟಲು ಆವರಿಸುತ್ತಿದೆ 
 ಹಕ್ಕಿಗಳ ಮನೆ ತಲುಪುವ ಹಾರಾಟ 
 ಮನ ಬಯಸಿದ  ಪ್ರೀತಿಗೆ  
 ಸಂಪ್ರೀತಗೊಂಡಿತು ಆಲಾಪ 
 ತಲ್ಲೀನವಾಯಿತು ಸೊಬಗ ಸೌಂದರ್ಯಕೆ 
 ಪೃಕ್ರತಿಯ ಸುಂದರ  ಮಡಿಲು      

ಶುಕ್ರವಾರ, ಏಪ್ರಿಲ್ 5, 2013

ಹಳೆ ಡೈರಿಯ ಪುಟಗಳಿಂದ


***********************
ಜೀವನ 
***********************
ನಗುವೇ ನಮ್ಮ ಜೀವನ 
ಅದರಿಂದ ರಕ್ತ ಸಂಚಲನ
ಮಾಡು ಈ ಜೀವನದ ಸಮ್ಮಿಲನ 
ಭಾವೈಕ್ಯದ ಆಲಿಂಗನ  

***********************
ತಂಗಿ 
***********************
ನಾ ನಲಿದಾಗ ನಲಿವಳು 
ಅತ್ತಾಗ ಅಳುವಳು 
ಸಮಾಧಾನ ಪಡಿಸುವಳು 
ಕಷ್ಟ ಸುಖದ ಸಂಗಾತಿ 
ಅವಳೇ ನನ್ನ ತಂಗಿ 
ಬಾಳ  ಹೆಣೆಗಾರ್ತಿ 


************************
ಸಾಮಿ-ಸ್ವಾಮಿ 
************************
ಓಡಿ  ಹೋದಳು ಹುಡುಗಿ 
ಆಸಾಮಿ ಜೊತೆಗೆ 
ಆ ಸ್ವಾಮಿ ಬಂದಾದರೂ 
ತಡೆಯಬಹುದಿತ್ತಲ್ಲವೇ 

*************************
ಕಪ್ಪು-ಬಿಳುಪು 
*************************
ಇಂದಿನ ರಾಜಕಾರಣವು 
ಕಪ್ಪು ಬಿಳುಪಿನ ಪರದೆಯಾಟವು 
ಎಂದಿಗೂ ಇದಕಿಲ್ಲ ಮುಕ್ತಿ 
ಕೊಡು ತಾಯೆ ಇದ ಎದುರಿಸುವ ಶಕ್ತಿ 

*************************
ಜಾಯಮಾನ 
**************************
ದಿನವುರುಳಿದವು  ನದಿಯ ನೀರಂತೆ 
ಜನ ಜೀವನವೇ ವಾರದ ಸಂತೆ 
ಜನಕಿಲ್ಲ ಈಗ ಬಿಡುವಿನ ಸಮಯ 
ಇನ್ನೆಲ್ಲಿದೆ ಇನ್ನು ಆ ನಯ-ವಿನಯ 

ಮಂಗಳವಾರ, ಮಾರ್ಚ್ 19, 2013

ಕುಚೋದ್ಯ ಮನಸ್ಸು

ಅಲ್ಲಲ್ಲಿ ಒಡೋಡುವುದು
ಕರೆದಾಗ ಒಲ್ಲೆ ಎನ್ನದು 
ಬಳಿ ಬಂದು ಸವರುವುದು 
ಬಹು ಬೇಗ  ರಮಿಸುವುದು
ರಾಗ ಸಲ್ಲಾಪಗಳ ಎತ್ತಿ ಹಿಡಿಯುವುದು
ಅತ್ತು ಗೋಳೊಯ್ದುಕೊಳ್ಳುವುದು 
ಖುಷಿಯಲ್ಲಿ ಮಿನುಗುವುದು 
ದುಃಖದಲ್ಲಿ ಗಗನ ಸುಮವಾಗುವುದು 
ಬೇಕೆಂದರಲ್ಲಿ ಸಾಥ್ ನೀಡದೆ ಸತಾಯಿಸುವುದು 
ಕುಚೋದ್ಯವ ಮಾಡುತಲಿಹುದು 
ಈ ನನ್ನ 'ಮುದ್ದಿ'ನ ಮನಸ್ಸು 

:) 

ಗೊಂದಲಗಳ ಮಧ್ಯದಲ್ಲಿ - ಕನಸು


ಮಲಗಿರಲು ಹಾಯಾಗಿ 
ರಾತ್ರಿ ಚಂದ್ರನ ಜೊತೆಯಾಗಿ 
ಯೋಚನೆಗಳಪ್ಪಳಿಸಿದವು ಜೋರಾಗಿ 
ನೆನಪುಗಳು ಹೋಳಾಗಿ 

ನಾ ಸರಿಯೇ ಅದು ಸರಿಯೇ
ತಾಳಮೇಳಗಳ ಕಾಗುಣಿತದಲಿ 
ಕಾಯಿಗಳು ಸಮ ವಿಷಮವೇ 
ಲೆಕ್ಕಗಳ ಬಿಡಿಸುವಿಕೆಯಲಿ  

ಭಾವನೆಗಳು ನೂರಾಗಿ 
ತೋರಿದವಲ್ಲಿ ತಮ್ಮಿರುವ 
ಕಣ್ಣುಗಳು ಮಂಜಾಗಿ 
ಮರೆಮಾಚಿದವು ದೃಶ್ಯಗಳ 

ಇನ್ನಷ್ಟು ಬೇಕೆನಗೆ 
ಕನಸು ಕಾಣುವ ಕನಸು 
ಕೈಯಲ್ಲಿ ಕೈ ಹಿಡಿವೆ 
ಸ್ನೇಹ ಪ್ರೇಮಗಳ ಬಿಂಬಿತದ ನನಸು  

ಮನ ತುಂಬಿ ನಿದ್ರಿಸುವೆ 
ಕನಸುಗಳಿಗೆ ಕೈ ಚಾಚಿ 
ಭಾವ ತುಂಬಿ ನಗುವೆ 
ಮರಳಿ ಯತ್ನವ ಮಾಡಿ 

 

ಗುರುವಾರ, ಜನವರಿ 31, 2013

ಕಾಲದೊಂದಿಗೆ........ಮಾತುಕತೆ



ನಾನೇನು ಹೊಸ  ವಿಷಯ ಬಳಸಿ ಏನನ್ನೋ ಹೇಳಲು ಹೊರಟಿಲ್ಲ..ದಿನನಿತ್ಯದಲ್ಲಿ ನಾವು ನೀವು ಚಿಂತೆ ಮಾಡಿ ಇದು ಆಗಿ ಹೋಗುವುದಲ್ಲ ಎಂಬ ನಿಟ್ಟುಸಿರು ಬಿಟ್ಟು ದೈನಂದಿನ ಕಾರ್ಯದಲ್ಲಿ ತೊಡಗಿಕೊಳ್ಳುವುದು ವಾಡಿಕೆ. ಅದೇ ವಿಷಯ .. ಕಾಲ ಬದಲಾವಣೆ . 

ಸಂಜೆ ೪ ರ ಸಮಯ.. ಆಫೀಸಿನಲ್ಲಿ ಕೂತು ಬೇಸರವೆನಿಸಿ ಸುಮ್ಮನೆ ವಿಶಾಲವಾದ ಸ್ಥಳಕ್ಕೆ ಹೋಗಲು ನಿರ್ಧರಿಸಿದೆವು. ಕೈಯಲ್ಲಿ ಬಿಸಿ ಬಿಸಿ ಚಹದ ಲೋಟ ಹಿಡಿದು ತಣ್ಣನೆಯ ಗಾಳಿ ಸೇವನೆ ನಮ್ಮ ವಿಶ್ರಾಮದ ಘಳಿಗೆಗೆ ಮತ್ತಷ್ಟು ಮೆರುಗು ಕೊಟ್ಟಿತು. ಒಬ್ಬೊಬ್ಬರು ಒಂದೊಂದು ಮಾತುಗಳನಾಡಲಿಕ್ಕೆ ಶುರು ಮಾಡಿದರು. ನಮ್ಮ ಕೆಲಸ ಹೀಗೆ, ನಮ್ಮ ಮ್ಯಾನೇಜರ್ ಹೀಗೆ ಹಾಗೆ ಎಂಬಿತ್ಯಾದಿ ವಿಚಾರಗಳು. 

ಇದೆಲ್ಲವನ್ನು ಒಮ್ಮೆ ನೆನೆಸಿಕೊಂಡರೆ ನೆಮ್ಮದಿಯ ಬದುಕಿಗೆ ನಾಂದಿ ಹೇಳುವ ಭಾವನೆ. ನಮ್ಮ ಅಪ್ಪ ಅಮ್ಮಂದಿರು ಹೇ ತ್ತಿದ್ದರು..ನಮ್ಮ ಕಾಲದಲ್ಲಿ ಹೀಗೆ ಇರಲಿಲ್ಲ..ಈಗ ಎಲ್ಲವೂ ಬದಲಾಗಿದೆ ಎಂದು. ಅದು ೩೦-೪೦ ವರ್ಷಗಳ ತರುವಾಯ.. ಆದರೆ ನಮ್ಮ ೨೦ ವರ್ಷಗಳ ಬದುಕಿಗೆ ನಾವು ಅವರಂತೆ ಮಾತನಾಡುವ ಕಾಲ ಸನಿಹವಾಗಿದೆ. ಶಾಲಾ ಕಾಲೇಜ್ ಇಂದ ಶುರುವಾಗಿದ್ದು. ಕನ್ನಡ ಮಾಧ್ಯಮದಲ್ಲಿ ಅದೂ ಸಹ ಸರ್ಕಾರಿ ಶಾಲೆಯಲ್ಲಿ ವರ್ಷಕ್ಕೆ ಅಬ್ಬಬ್ಬ ಎಂದರೆ ೩೦೦-೪೦೦ ರೂಪಾಯಿ ಖರ್ಚು ಮಾಡಿ ಕಲಿತಿದ್ದ ಕಾಲ ಇನ್ನಿಲ್ಲವಾಗಿದೆ. ಚಿಕ್ಕ ಮಕ್ಕಳಿಗೆ ಇಂಟರ್ವ್ಯೂ ಬೇರೆ ಏಗ. ಅದರೊಟ್ಟಿಗೆ ಲಕ್ಷಗಟ್ಟಲೆ ಕೊಟ್ಟು ಅಪ್ಪ ಅಮ್ಮನೂ ಇಂಟರ್ವ್ಯೂ ಗೆ ಸಿದ್ದರಾಗಬೇಕು.. ಅಲ್ಲದೆ ಅಪ್ಪ ಅಮ್ಮ ಇಬ್ಬರೂ ಕೆಲಸದಲ್ಲಿರಬೇಕು.. ಇಷ್ಟೆಲ್ಲಾ ಮಾಡಿ ಹೆಗಲಿಗೆ ಮಣ ಭಾರದ ಚೀಲ ಹಾಕಿ ಅಮ್ಮನಿಗೆ ಬೈ ಮಾಡಿ ಹೋಗುವ ಕಂದಮ್ಮಗಳು ಕಣ್ಣೆದರಿಗೆ ಕಾಣುತ್ತವೆ. ವಿಧಿ ಇಲ್ಲದೆ ಇಂತಹ ಪರಿಸ್ಥಿತಿಗೆ ಒಗ್ಗೂಡಬೇಕಾಗಿದೆ . ನಮ್ಮ ಶಾಲಾ ಜೀವನವೇ ಹಳ್ಳಿಯ ಸೊಗಡಿದಿಂದ ಕೂಡಿರುತ್ತಿತ್ತು.. ಶಾಲಾ ಅಕ್ಕೋರು ಬಾಯೋರು ಮಾಸ್ತರರ ಪ್ರೀತಿ ತುಂಬಿದ ಪಾಠಗಳು, ಆಟೋಟಗಳು ಈಗಿನ ಕಾಲದ ಮಕ್ಕಳಿಗೆ ಸಿಗುತ್ತೋ ಇಲ್ಲವೋ ತಿಳಿಯದು. ಆದರೆ ಈಗಿನ ಕಾಲದ ಮಕ್ಕಳ ಸಮಯ ಕಳೆಯುವ ಪರಿಪಾಠ ಕಂಪ್ಯೂಟರ್ ಮುಂದೆ ಕೂತು ಆಟವಾಡುವುದು, ಸೋಶಿಯಲ್ ನೆಟ್ವರ್ಕಿಂಗ್ ಅಲ್ಲಿ ಮಾತುಕತೆ. ಎಷ್ಟೊಂದು ವ್ಯತ್ಯಾಸ ಕಾಣುತ್ತದೆ. ನಮಗೆ ಇದರ ಅನುಭವವಾಗುವಾಗ ಇನ್ನು ನಮ್ಮ ತಂದೆ ತಾಯಿಯರಿಗೆ ಇನ್ನು ಬಹು ದೊಡ್ಡ ವ್ಯತ್ಯಾಸ ತಿಳಿಯಬಹುದು. 

ಖರ್ಚಿನ ಮಾತು ಬಂದರೆ, ೨-೩ ವರ್ಷಗಳ ಹಿಂದೆ ತಿಂಗಳಿಗೆ ೫೦-೧೦೦ ಖಾಲಿ ಮಾಡಿದರೆ ಅದೇ ದೊಡ್ಡದು ಅನ್ನಿಸುತ್ತಿತ್ತು..ಈಗ  ದಿನಕ್ಕೆ ೧೦೦ ರೂಪಾಯಿ ಎಲ್ಲಿಗೋ ಸಾಲಲ್ಲವೆಂಬ  ಭಾವ. ಕೈಯಲ್ಲಿ ಭಾರಿ ನೋಟುಗಳನ್ನು ಎಣಿಸುವ ಕಾಲ ನಮ್ಮದು. ಆದರೆ ಅದೂ ಸಾಲದು ಎಂಬ ಕೊರಗು ಬೇರೆ. ಅದು ನಮಗೆ ನಾವೇ ಕಟ್ಟಿಕೊಂಡ ಅ-ಸೀಮಿತದ ಗಡಿಯೇ ? ಸಂತೋಷದ ಹುಡುಕಾಟದಲ್ಲಿ , ಹಣ ಕೂಡಿಡುವ ನಿರ್ಣಯದಲ್ಲಿ ನಮ್ಮ ಜೀವನದ ಅಮೂಲ್ಯವಾದ ಕ್ಷಣಗಳನ್ನು ಆಫೀಸಿನಲ್ಲಿ ಕಳೆಯುತ್ತಿದ್ದೇವೇನೋ ಅನಿಸುತ್ತದೆ. 

ಸುಖ ಶಾಂತಿ ತುಂಬಿದ ಜಾಗಕ್ಕೆ ಹಣ ಖರ್ಚು ಮಾಡಿ ಹೋಗುವ ನಿರ್ಧಾರ. ನಮ್ಮಲ್ಲಿ ಖುಷಿಯನ್ನು ಕಳೆದುಕೊಂಡು ಅದರ ಹುಡುಕಾಟಕ್ಕೆ ಹಣ ಖರ್ಚು ಮಾಡಿ ದೂರದೂರುಗಳಿಗೆ ನಮ್ಮ ಪಯಣ. ಪ್ರವಾಸದ ನಂತರ ಮತ್ತದೇ ದಿನಚರಿಗೆ ನಮ್ಮನ್ನು ಪ್ರೇರೇಪಿಸುವುದು. ಇದು ನಮ್ಮೆಲ್ಲರ ಜೀವನದ ಕ್ರಮವಾಗಿದೆ. 

ಪ್ರತಿ ವಾರವೂ ಶಾಪಿಂಗ್ ಎಂಬ ನೆಪದಲ್ಲಿ ವಸ್ತ್ರ ಖರೀದಿ . ಹಬ್ಬಕ್ಕೊಂದು ಹೊಸ ಬಟ್ಟೆ ಕೊಳ್ಳುವ , ಹಬ್ಬ ಬರುವವರೆಗೆ ಕಾಯುವುದುದರಲ್ಲಿ ಒಳ್ಳೆಯ ಮಜಾ ಇತ್ತು. ಈಗ ಬೇಕೆನ್ನುವಾಗ ಮಾಲ್, ದೊಡ್ಡ ದೊಡ್ಡ ಅಂಗಡಿಗಳಿಗೆ ಲಗ್ಗೆ ಇಟ್ಟು ಕೊಳ್ಳುವುದು. ದಿನವೂ ಹಬ್ಬದಂತೆ. 

ನಿಜವಾಗಿಯೂ ಕಾಲ ಬದಲಾಗಿದೆಯೇ ಅಥವಾ ನಾವು ಕಾಲವನ್ನು ಬದಲಾವಣೆ ಮಾಡಿದೆವಾ ? ಇದನ್ನೆಲ್ಲಾ ಯೋಚನೆ ಮಾಡುವುದರೊಳಗೆ ಸಂಜೆ ಆಗಿ ಸೂರ್ಯ ಮನೆಗೆ ಹೊರಟು ನಮ್ಮನ್ನು ಮನೆಗೆ ತೆರಳಿಸುವುದರಲ್ಲಿ ಇದ್ದ.. ಇಷ್ಟೆಲ್ಲಾ ವಿಚಾರ ವಿನಮಯ ಮಾಡಿಕೊಂಡು , ಅಯ್ಯೋ ನಾಳೆ ಮತ್ತೆ ಆಫೀಸ್ ಎಂದು ಚಪ್ಪೆ ಮೋರೆ ಹೊತ್ತು ಕಾಲಕ್ಕೆ ತಕ್ಕಂತೆ ನಾವು ಎಂದು ಗೊಣಗಿಕೊಳ್ಳುತ್ತ ನಾಳೆಯ ಸಿದ್ದತೆಗೆ ಮನಸ್ಸನ್ನು ಸಜ್ಜುಗೊಳಿಸಲು 
ಪ್ರಾರಂಭಿಸೆದೆವು.. 

ಅಂದೊಂದಿತ್ತು ಕಾಲ.. ಎಂಬ ಹಾಡಿನ ಸಾಲುಗಳು ಗಾಳಿಯಲ್ಲಿ ತೇಲಿ ಹೋದಂತ ಅನುಭವ..        

ಬುಧವಾರ, ಜನವರಿ 30, 2013

ವಿಸ್ತರಣಾ ಪ್ರೀತಿ


   ಇಂದೆನ್ನ ಬಂದು ಬಿಗಿದಪ್ಪಿದವು 
   ಕಂಡು ಕಾಣರಿಯದ ನನಸಿನ ಕೈಗಳು 
   ಪ್ರೇಮದಾಲಪನೆ ಗೈದವು 
   ಭಾವನಾತ್ಮಕ ಮಾತುಗಳು 

   ಸಂಭ್ರಮಿಸಿದವು ನನ್ನ ಅಕ್ಷಿಪಟಗಳು  
   ರಂಗು ರಂಗಿನ ಕನಸಿನೊಂದಿಗೆ 
   ಗರಿ ಕೆದರಿ ಪುಳಕಿತಗೊಂಡಿತವು 
   ಮನಸಿನ ಭಾವ ಸಿಂಚನದೊಂದಿಗೆ 

   ಕನಸಿನ ಚೀಲಗಳು ತುಂಬಲಾರಂಭಿಸಿದವು 
   ಹೊಸ ಜೀವನದ ಪರಿಕಲ್ಪನೆಯೊಂದಿಗೆ 
   ಭಾರವಾದ ಮನ ಹಗುರಗೊಂಡಿತು 
   ಮಡಲಿನ ಆಸರೆಯೊಂದಿಗೆ 

   ಸ್ಮೃತಿ ಪಟಲ ತೆರೆದಿಟ್ಟುಕೊಳ್ಳಲು 
   ಭಾವನೆಗಳ ನರ್ತನ ಆರಂಭವಾಗಲು 
   ಬಾಹು ಬಂಧನ ಸನಿಹವಾಗಲು
   ಪ್ರೀತಿಯ ವಿಸ್ತರಣೆ ಇನ್ನು ಸುಲಭವಾಯಿತು 

ಬುಧವಾರ, ಜನವರಿ 9, 2013

ಬರಲಿವೆ ಒಳ್ಳೆಯ ದಿನಗಳು- ಬಂದೆ ಬರುತ್ತಾವೆ
*********************************************

ಒಡಲೊಳಗೆ ಬೆಂದು ನೊಂದ ಜೀವಕ್ಕೆ 
ಹೊಸ ಸಂಭ್ರಮ 
ಕತ್ತಲಲಿ ಕೂತ  ಭಾವಕ್ಕೆ
ಹೊಸ ಅಂಬರ 

ನಗು ನಗುತ ಬಾಳಿದ ಜೀವನಕ್ಕೆ 
ತಂದಿತು ನೆಮ್ಮದಿಯ ಆಸರೆ 
ಸಿಟ್ಟು, ಅಸಹನೆಯಲಿ ನಡೆದ ದಾರಿಗೆ 
ತಿಳಿಯದಾದವು ಜೀವನದ ಮರ್ಮರ  

ಚಿರ ನಗುವಿನ ಮೊಗದಲ್ಲಿ 
ಕನಸು ನನಸಾಗುವ ಘಳಿಗೆ 
ಸುಂದರ ಭಾವಗಳ ಸಮ್ಮಿಲನದಲಿ 
ಜೀವನದ ಸುಖದ ಉಪ್ಪರಿಗೆ