(ನೈಜ ಘಟನೆಯಾಧಾರಿತ)
ಸರೋಜಾದೇವಿಯವರಿಗೆ ನಿದ್ದೆಯೇ ಬರುತ್ತಿಲ್ಲ. ಹಾಸಿಗೆಯ ಮೇಲೆ ಮಗ್ಗಲು ಬದಲಿಸಿದ್ದಷ್ಟೇ ಬಂತು. ನಿದ್ದೆಯ ಸುಳಿವಿಲ್ಲ. ಗಡಿಯಾರದ ಮುಳ್ಳು ಒಂದುವರೆ ಘಂಟೆಯನ್ನು ತೋರಿಸುತ್ತಿತ್ತು. ಪಕ್ಕದ ಕೋಣೆಯಲ್ಲಿ ಮಗ,ಸಂಪತ್, ಮಲಗಿದ್ದ. ಸರೋಜಾದೇವಿ ಹಾಗೂ ಸಂಜಯ ಇಬ್ಬರ ಮದುವೆಯಾಗಿ ಬಹಳ ವರ್ಷಗಳ ನಂತರ ಜನಿಸಿದ ಪ್ರೀತಿಯ ಮಗು. ಕಾಳಜಿ, ಪ್ರೀತಿ, ಮುದ್ದು ಅತಿಯಾಗೇ ಇತ್ತು. ಈಗ ಸಂಪತ್ ಓದು ಮುಗಿಸಿ ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಸರೋಜಾದೇವಿಯವರಿಗೆ ಆಗಲೇ ಅರವತ್ತು ವರ್ಷ ದಾಟಿತ್ತು. ಮಗನ ಮದುವೆಯು ಮುಂದಿನ ತಿಂಗಳಿನಲ್ಲಿ ಮಾಡಲು ಯೋಜಿಸಲಾಗಿತ್ತು. ಹೈಸ್ಕೂಲ್ ಓದುವಾಗಲೇ ಅಪ್ಪನನ್ನು ಕಳೆದುಕೊಂಡಿದ್ದ ಸಂಪತ್ತಿಗೆ ಜವಾಬ್ದಾರಿಯ ಹೊರೆ ಆಗಲೇ ಗೊತ್ತಾಗಿತ್ತು.
ಸರೋಜಾದೇವಿಯವರ ಗೆಳತಿಯರ ಬಳಗದಲ್ಲಿ ಒಂದಿಷ್ಟು ಮಂದಿಗೆ ಸೊಸೆಯಂದಿರು, ಅಳಿಯಂದಿರು ಬಂದಿದ್ದರು. ಅವರಲ್ಲಿ ಒಂದಿಷ್ಟು ಜನರಿಗೆ ಸೊಸೆಯ ನಡೆಗಳು ಇಷ್ಟವಾಗುತ್ತಿರಲಿಲ್ಲ, ಮಗನ ಹೆಚ್ಚಿನ ಜವಾಬ್ದಾರಿಯ ಅರಿವಾಗದೆ ಆತನ ನಡವಳಿಕೆಯಲ್ಲಿ ಬದಲಾವಣೆ ಕಾಣುತ್ತಿದೆ ಎಂಬ ಕಳವಳ ಇವೆಲ್ಲ ದಿನನಿತ್ಯದ ಫೋನಿನ ಸಂಭಾಷಣೆಯಲ್ಲಿ ವಿನಿಮಯವಾಗುತ್ತಿತ್ತು.
ಸಂಜೆಯ ವೇಳೆ ಹೊತ್ತು ಕಳೆಯಲು ಟಿವಿಯ ಮೊರೆ ಹೊಕ್ಕ ಸರೋಜಾದೇವಿ ನೋಡುತ್ತಿದ್ದ ಧಾರಾವಾಹಿಗಳಲ್ಲೆಲ್ಲ ಅತ್ತೆ,ಸೊಸೆ ವೈಮನಸ್ಸಿನ ಕಥೆಗಳೇ ಜಾಸ್ತಿ ಇದ್ದವು.
ಮದುವೆ ವಿಜೃಂಭಣೆಯಿಂದ ಮುಗಿಯಿತು. ಸರೋಜಾದೇವಿಗೆ ಎಲ್ಲಿಲ್ಲದ ಆತಂಕ, ಕಳವಳ ಒಮ್ಮಿಂದೊಮ್ಮೆಗೆ ಶುರುವಾಯಿತು. ಮಗನ ಜೊತೆ ಸೊಸೆಯ ಕುರಿತಾದ ಭಿನ್ನಾಭಿಪ್ರಾಯವನ್ನೇ ದೂರುವ ಪರಿಪಾಠವಾಯಿತು. ಸಮಾಧಾನದ ನುಡಿಗಳು ಸಮಾಧಾನವನ್ನು ಮಾಡುತ್ತಿರಲಿಲ್ಲ. ದಿನದಿನವೂ ಇದೇ ಪರಿಸ್ಥಿತಿ ಮುಂದುವರೆಯಿತು. ಇದನ್ನು ಗಮನಿಸಿದ ಸಂಪತ್, ಸರೋಜಾದೇವಿಯ ಒಂದಿಷ್ಟು ಗೆಳತಿಯರನ್ನು ಸಂಪರ್ಕಿಸಲು ಪ್ರಯತ್ನಿಸಿದ. ತನ್ನಮ್ಮನಿಗೆ ಇರುವ ಸಮಸ್ಯೆಯೇನೆಂದು ತಿಳಿಯಲು ಯತ್ನಿಸಿದ. ಚಂದದ ಜೀವನವನ್ನು ಸಾಗಿಸಬಹುದಾಗಿದ್ದ ಸರೋಜಾದೇವಿ ಧಾರಾವಾಹಿಯ ಕಥೆಗೆ ದಾಸಳಾಗಿಬಿಟ್ಟರು. ಒಂದಿಷ್ಟು ಗೆಳತಿಯರ ಸೊಸೆಯಂದಿರ ಮೇಲಿನ ದೂರು ತನ್ನ ಸೊಸೆಗೂ ಸಾವರಿಸಿಬಿಟ್ಟರು. ದಿನದಿನವೂ ಇದೇ ಯೋಚನೆಯಲ್ಲಿ ಕುಗ್ಗುತ್ತಾ ಹೋದರು. ಗೆಳತಿಯರ ಪ್ರಯತ್ನ ಫಲಕಾರಿಯಾಗಲೇ ಇಲ್ಲ. ಇಲ್ಲದ ಸಮಸ್ಯೆಯನ್ನು ಊಹಿಸಿ, ಸೃಷ್ಟಿಸಿಕೊಂಡು ಮಾನಸಿಕವಾಗಿ ಕುಗ್ಗಿಹೋದರು. ಮಗ,ಸೊಸೆಯ ಸಂಸಾರದ ಕಡಲಲ್ಲಿ ತಾವು ಸುಖವಾಗಿ ಪ್ರಯಾಣಿಸಬೇಕಾದ ಸಮಯದಲ್ಲಿ ಸಾವನ್ನು ಎಳೆದುಕೊಂಡರು.
ಯಾರೂ ಇಲ್ಲದ ಸಮಯದಲ್ಲಿ ನೇಣಿಗೆ ಶರಣಾಗಿಯೇ ಬಿಟ್ಟರು.
ಪ್ರತಿ ವರ್ಷ ಅಮ್ಮನನ್ನು ನೆನೆಸಿ ಕಣ್ಣೀರಿಡುವ ಸಂಪತ್ ಹುಡುಗನಿಗೆ ಅಮ್ಮನ ಸಾವು ಕಣ್ಮುಂದೆ ಬರುತ್ತಲೇ ಇರುತ್ತಿರುತ್ತದೆ.