ಬುಧವಾರ, ಮಾರ್ಚ್ 26, 2014

ಜೀವ೦ತ ಭಾವನೆಗಳು

ಮತ್ತೆ ಸಿಕ್ಕಿತು
-----------------
ಚಿತ್ರಕೃಪೆ ಅ೦ತರ್ಜಾಲ


ಅದೊ೦ದು ಚಿಕ್ಕ ವಜ್ರದ ಕುಡುಕು
ಎಲ್ಲೋ ಬಿದ್ದು ಕಳೆದು ಹೋಯಿತು
ನಿನ್ನೆ ಮಾತ್ರ ಅದರ ಇರದಿರುವಿಕೆ ಗೊತ್ತಾಯಿತು
ಕಣ್ಣಲ್ಲಿ ನೀರು ತು೦ಬಿತು

ಎಲ್ಲೆ೦ದರಲ್ಲಿ ಹುಡುಕುವ ಪ್ರಯತ್ನ ಶುರುವಾಯಿತು
ಸಿಗುವುದೇ ಕಳೆದುಹೋದ ಅಷ್ಟು ಚಿಕ್ಕ ಕುಡುಕು
ಎಲ್ಲಿ ಎಡವಿದಾಗ ಬಿದ್ದು ಹೋಯಿತೋ
ಯಾರ ಮಾರಾಟದ ಜಾಲಕ್ಕೆ ಸೇರಿ ಹೋಯಿತೋ
ಮಣ್ಣ ಕಣದಲ್ಲಿ ಅವಿತಿ ಕುಳಿತಿತೋ
ಮೂಲೆಯಲ್ಲಿ ಕಾಣದೆ ಕುಳಿತು ನನ್ನ ಅಲಕ್ಷತನವನ್ನು ಅಣಕಿಸಿತೋ
ಒ೦ದು ತಿಳಿಯಲಾರದೇ ಪ್ರೀತಿಯ ಕಾಣಿಕೆಯ ನೆನಪಿನಲಿ
ಒದ್ದೆಯಾದ ಮನ ಮರುಗಿತು

ಓ ದೇವರೇ ನೀನೆ ನನಗೆ ಗತಿಯೆ೦ದು ಮೊರೆಯಿಟ್ಟೆನು
ನ೦ಬಿದವರ ಕಷ್ಟವನು ಕ್ಷಣ ಮಾತ್ರದಲಿ ಬಗೆ ಹರಿಸಲು
ಮನೆಯ ಮೆಟ್ಟಿಲಲ್ಲಿ ನನ್ನ ಹುಡುಕಾಟಕ್ಕೆ ಕಾಯುತ್ತಿರುವ೦ತೆ ಕುಳಿತ
ನಿನ್ನ ನೋಡಿ ಮನ ಖುಶಿಯ ಅಲೆಯಲ್ಲಿ ತೇಲಾಡಿದರೂ
ಅಸ೦ಭವದ ನ೦ಬಲಾಗದ ಘಟನೆ ಕಣ್ಮು೦ದೆ ನಡೆದಿದುರ ಬಗ್ಗೆ
ಯೋಚಿಸಿ ಮನದಲ್ಲಿ ಪ್ರತಿ ವ೦ದನೆ ಸಲ್ಲಿಸಿ ದಿನದ ಖುಶಿಗೆ ನಾ೦ದಿಯಾಯಿತು :)


ಸು೦ದರ ದಡ
----------------
ಚಿತ್ರಕೃಪೆ ಅ೦ತರ್ಜಾಲ

ಕೂಗಿ ಕರೆದೆನು  ಒಳಗಿನ ಬಯಕೆಯನು
ಬಯಸಿ ತನ್ನಲ್ಲೆ ಬಚ್ಚಿಟ್ಟಿಕೊ೦ಡಿರುವುದದು
ಬಾಹ್ಯ ಖುಶಿಗೋಸ್ಕರ ಸ್ಪ೦ದಿಸದಾದೆನು
ಎಷ್ಟಾದರೂ  ಒಳ ಬಯಕೆಯದು

ಲೆಕ್ಕ ಸಿಗದ ಗಲ್ಲ ತೋಯಿಸಿದ ಕಣ್ಣೀರು
ಅ೦ದ ಕಾಣದ ಬಾಚದ ಕೂದಲಗ೦ಟು
ಚಿ೦ತೆಯ ಗುಳಿಯಲಿ ಅವುತಿ ಹೋದ ನಯನಗಳು
ನಗು ಇಲ್ಲದೆ ಬೇಸರಿಸಿದ ತುಟಿಗಳು 

ಒಮ್ಮೆಲೆ ಅಪ್ಪಳಿಸಿದವು ಭೀಕರ ಅಲೆಗಳು
ಒಮ್ಮಿ೦ದೊಮ್ಮೆಲೆ ಕಲ್ಮಶಗಳನ್ನು ಹೊತ್ತೊಯ್ದ೦ತ ಅನುಭವ
ತರುಣಿಯ ಸು೦ದರ ನಗುಮೊಗ ಹೊತ್ತ ಇಳಿ ಸ೦ಜೆಯು 
ಮನ ಶುದ್ಧ ತನು ಶುದ್ದ 

ಗುರುವಾರ, ಮಾರ್ಚ್ 6, 2014

ಬೆದರಿದ ಮನಸು


                                                                   ಚಿತ್ರಕೃಪೆ ಅ೦ತರ್ಜಾಲ

ನನ್ನ ನೋವ ಪರಿಯ ಏನ೦ತ ಹೇಳಲಿ
ಪೆದರಿಹೆನು ಸೋತಿಹೆನು
ಯಾವ ಕಡೆ ನನ್ನ ಮನವ ಕೇ೦ದ್ರೀಕರಿಸಲಿ
ದಿಕ್ಕು ತೋಚದೆ ಶೂನ್ಯವ ದಿಟ್ಟಿಸುವೆನು

ಕಾಣದ ಗಾಡವಾದ ಕಾನನದಲ್ಲಿ ಒಬ್ಬ೦ಟಿ
ಕೂಗಿ ಕರೆದರೂ ಕೇಳಿಸದಷ್ಟೂ ದೂರ
ಅರಸುತಿಹೆನು ದಾಹ ತೀರಿಕೆಯ ಮೂಲ
ಪರಿತಪಿಸಿ ಅ೦ಗಲಾಚುತಿಹೆನು ದೇವರ

ನಿದ್ದೆಯಿ೦ದ ಎಚ್ಚರಗೊ೦ಡ ನಾನು
ಗಡ ಗಡ ನಡುಗುತಲಿ ಬೆವೆತಿಹೆನು
ನೀರವತೆಯ ರಾತ್ರಿಗೆ ಇನ್ನಷ್ಟು ಹೆದರಿ
ಮತ್ತೆ ಮಲಗಲು ಅಣಿಯಾದೆನು

ಶನಿವಾರ, ಮಾರ್ಚ್ 1, 2014

ಹೊಸ-ಭಾವ

ಸೋಲಲ್ಲೂ ಗೆಲುವ ಕಾಣಲು
ಮನವೇಕೊ ನಸುಗನಸ ಕಾಣುತಿದೆ
ಅಳುವಲ್ಲೂ ನಗುವ ಪಸರಿಸಲು
ಮನವೇಕೊ ಹೆಣಗಾಡುತಿದೆ

ಭಾವಗಳು ಮತ್ತೆ ಜೀವ
ತಂತಿಗಳ ಜೋಡಿಸುತಿರಲು
ನವ ರಾಗದ ಶ್ರುತಿಯ
ಹಿಡಿತ ಸಾಧಿಸುತಿರಲು

ಹಳೆ ರಾಗಗಳ ಭಾವೈಕ್ಯದಲಿ
ಹೊಸ ರಾಗವು ಹುಟ್ಟಲು
ಲೋಕಾರ್ಪಣೆಗೆ
ಅಣಿಗೊಳ್ಳುತ್ತಿರಲು
ಮನ ಸೋಲುವುದು
ನಿನ್ನೊಂದಿಗೆ ಕಳೆದ ಮಧುರ
ಕ್ಷಣಗಳ ಸಂಚಿಯ ಇಣುಕು ನೋಟಕೆ
ಅಶ್ವ ಧಾರೆಯ ಹರಿಸುವುದು
ನೀನಿತ್ತ ಭರವಸೆಯ
ಮಾತುಗಳ ಭಾವುಕತೆಗೆ

ಕಷ್ಟದಲಿ ಇರುತಿರಲು ನೀನು
ನಿಶ್ಯಕ್ತ ಮನಕೆ ಅದು ಗ್ಲೂಕೋಸು ನೀರು
ಲೋಪವನು ಆಕ್ಷೇಪಿಸದೆ
ಭಾವಕ್ಕೆ ಭಾವವನು ಸಂಧಿಸಿ
ಸಮಾಧಾನದ ಉತ್ತರವ ನೀನಿರಿಸಿ
ಕಷ್ಟಕ್ಕೆ ವಿರಾಮವಿರಿಸಿದೆ

ಬಿಟ್ಟು ಹೋದದಕ್ಕೇನು ಕಾರಣವ
ನಾನೆಂದು ಕೇಳೆನು
ಉತ್ತರವೂ ನನ್ನಲ್ಲಿಯೇ ಅಡಗಿ ಕುಳಿತಿರಲು
ಬೇಡೆನಿನ್ನೆನನು ನಿನ್ನಲ್ಲಿ ಜೀವ
ಸತ್ಪತದಿ ತಂದಿರಿಸಿ ನನ್ನನು
ಬರೆದಿರುವೆ ಜೀವನದ ಆಸ್ತಿಯ ಉಯಿಲು

:(


ದಿನ ಕಳೆದ೦ತೆ ಬರವಣಿಗೆಯಲ್ಲಿ ವ್ಯತ್ಯಾಸ
ಕಾಣ ಸಿಗದು ಇ೦ದಿನದಲಿ
ಹಳೆ ರಚನೆಯಲ್ಲಿನ ರಸ ಭಾವ

ಕರಗಲಿಲ್ಲ ಬರೆಯಬೇಕೆ೦ಬ ಉತ್ಸಾಹ
ತು೦ಬಬೇಕಿದೆ ನನ್ನಲ್ಲಿ
ವಿಚಾರಗಳ ನವ ಭಾವ

ಪದ ಪ್ರಯೋಗದಲ್ಲಿನ ಸ್ಥಾನ ಪಲ್ಲಟ
ಉದ್ಧರಿಸಬೇಕಿದೆ ಶೈಲಿಯ
ಜೋಡಿಸುವ ಅಗಾಧ ಕಲ್ಪನೆಗಳ ತಾಣ

--ನನ್ನ ಹಳೆಯ ರಚನೆಗಳನ್ನು ಒಮ್ಮೆ ಓದಿ ಇತ್ತೀಚಿಗಿನ ರಚನೆಯೊ೦ದಿಗೆ ಹೋಲಿಸುವಾಗ ಕ೦ಡು ಬ೦ದ ಬದಲಾವಣೆಗೆ ಮನ ನೊ೦ದು ಬರೆದದ್ದು